ಮಂಗಳಮುಖಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವದಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ

ಬೆಂಗಳೂರು, ಅ.31- ನಗರದಲ್ಲಿ ನವೀನ ಅಲಿಯಾಸ್ ಪ್ರೀತಿ ಎಂಬ ಮಂಗಳಮುಖಿಯನ್ನು ಕೊಲೆ ಮಾಡಿದ್ದ ಆರೋಪಿ ಅಬ್ದುಲ್ ಫರೀದ್‍ಗೆ ಸಿಸಿಎಚ್ 1ನೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ದಂಡ ಕೊಡಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಮೂರು ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿದೆ.

ಕಳೆದ 2011ರ ಅ.28ರಂದು ಸಂಜೆ 7.40ರಲ್ಲಿ ಮೈಸೂರು ರಸ್ತೆಯ ಶಾಮಣ್ಣ ಗಾರ್ಡನ್, ಬಿಡಬ್ಲ್ಯೂಎಸ್‍ಎಸ್‍ಬಿ ರಸ್ತೆಯ ಕೃಷ್ಣಪ್ಪ ಬೀರು ಫ್ಯಾಕ್ಟರಿ ಮುಂಭಾಗ ನವೀನ ಅಲಿಯಾಸ್ ಪ್ರೀತಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಅಬ್ದುಲ್ ಫರೀದ್ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು, ಇವರು ಸಹಕರಿಸದಿದ್ದಕ್ಕೆ ಹಿಂಬಾಲಿಸಿಕೊಂಡು ಬಂದು ಚಾಕುವಿನಿಂದ ಪ್ರೀತಿಯ ಹೊಟ್ಟೆಗೆ ಚುಚ್ಚಿ ಪರಾರಿಯಾಗಿದ್ದನು.

ಗಸ್ತಿನಲ್ಲಿದ್ದ ವೆಂಕಟೇಶ್ವರಲು ಮತ್ತು ರಾಮಕೃಷ್ಣ ಎಂಬ ಸಿಬ್ಬಂದಿ ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ತೆರಳಿ ಪ್ರೀತಿಯನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆಯಿಂದ ಗುಣಮುಖರಾಗದೆ 2011 ನ.15ರಂದು ಮೃತಪಟ್ಟಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಠಾಣೆ ಇನ್ಸ್‍ಪೆಕ್ಟರ್ ಕೋದಂಡರಾಮ್ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸಾಕ್ಷಿ ವಿಚಾರಣೆ ಮಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ್ ಬಿ.ಅಮರಣ್ಣವರ್ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರೂ.ದಂಡ, ಈ ದಂಡ ಕಟ್ಟಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ ಮೂರು ತಿಂಗಳ ಸಾದಾ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

ಭಾರತ ವಿದೇಶದಲ್ಲಿ ತನ್ನ ಶ್ರೀಮಂತಿಕೆಯನ್ನು ಅಚ್ಚೊತ್ತಲು ಕಾಫಿ ಬೆಳೆ ಕಾರಣ:
ಬೆಂಗಳೂರು, ಅ.31-ಕಾಫಿ ಬೆಳೆಯಿಂದಾಗಿಯೇ ಭಾರತ ವಿದೇಶದಲ್ಲಿ ತನ್ನ ಶ್ರೀಮಂತಿಕೆಯನ್ನು ಅಚ್ಚೊತ್ತಿದೆ. ಕಾಫಿ ಬೆಳೆಗಾರರು ಕಾಲ ಕಾಲಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕಾಫಿಯನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕು ಎಂದು ಬ್ರ್ಯಾಂಡ್ ಗುರು ಹರೀಶ್ ಬಿಜೂರು ಹೇಳಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಲಾಗಿದ್ದ ಪ್ಲಾಂಟರ್ಸ್ ಅಸೋಸಿಯೇಷನ್‍ನ 60ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ವಿದೇಶಗಳಲ್ಲಿ ಭಾರತ ಎಂದರೆ ಬಡರಾಷ್ಟ್ರ ಎಂಬ ವ್ಯಾಖ್ಯಾನ ಇರುವುದು ನಿಜ. ಅದರ ಜೊತೆಯಲ್ಲೇ ಕಾಫಿಯಂತಹ ಬೆಳೆಯನ್ನು ಕಾಪಾಡಿಕೊಂಡು ಬಂದಿರುವ ಭಾರತ ಶ್ರೀಮಂತ ರಾಷ್ಟ್ರವೂ ಹೌದು ಎಂದು ಹೇಳಲಾಗುತ್ತಿದೆ.

ಆದಾಯದ ಏರುಪೇರಿನಿಂದಾಗಿ ಪ್ಲಾಂಟರ್ಸ್ ಕಾಫಿ ಬೆಳೆಯಿಂದ ವಿಮುಖರಾಗಬಾರದು. ಹೊಸ ಸವಾಲುಗಳನ್ನು ಎದುರಿಸಲು ಆಧುನಿಕ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಡಿಜಿಟಲ್ ತಂತ್ರಜ್ಞಾನದಿಂದ ಕಾಫಿಯ ಗುಣಮಟ್ಟವನ್ನು ಕರಾರುವಕ್ಕಾಗಿ ಕಂಡು ಹಿಡಿಯಲು ಸಾಧ್ಯವಿದೆ, ಅದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಉತ್ತರ ಭಾರತದಲ್ಲಿ ಟೀ ಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆ ವಲಯದಲ್ಲಿ ಕಾಫಿ ರುಚಿಯನ್ನು ಹೆಚ್ಚಾಗಿ ಪರಿಚಯಿಸಬೇಕು. ಈ ಮೂಲಕ ನಮ್ಮ ಸ್ಥಳೀಯ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಟಿ.ಪ್ರಮೋದ್ ಮಾತನಾಡಿ, ಇತ್ತೀಚಿಗೆ ಕಾಫಿಯ ಉತ್ಪಾದನೆ ಹೆಚ್ಚಾಗುತ್ತಿದೆ. 2017-18ರಲ್ಲಿ 3.16ಲಕ್ಷ ಟನ್ ಉತ್ಪಾದನೆಯನ್ನು ನಿರೀಕ್ಷೆ ಮಾಡಲಾಗಿತ್ತು. ಅದರಲ್ಲಿ 4 ಸಾವಿರ ಟನ್ ಹೆಚ್ಚು ಉತ್ಪಾದನೆಯಾಗಿದೆ.ಕಾಫಿ ಬೋರ್ಡ್‍ನ ನಿರೀಕ್ಷೆಗಿಂತಲೂ ಉತ್ಪಾದನೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಶೇ.30 ರಿಂದ 40 ರಷ್ಟು ಕಾಫಿ ಬೆಳೆ ಹಾಳಾಗಿದೆ. 2017-18ರಲ್ಲಿ ಸುಮಾರು 6,210 ಕೋಟಿ ರೂ.ಮೌಲ್ಯದ 3.95 ಲಕ್ಷ ಟನ್ ಕಾಫಿಯನ್ನು ಭಾರತ ರಫ್ತು ಮಾಡಿದೆ.ಸ್ಥಳೀಯವಾಗಿ 1.41 ಲಕ್ಷ ಟನ್ ಬಳಕೆಯಾಗಿದೆ.ಕಾಫಿ ಬೆಳೆಯಲ್ಲಿ ಸಗಟು ಮತ್ತು ಚಿಲ್ಲರೆ ಮಾರಾಟ ನಡುವಿನ ವ್ಯತ್ಯಾಸ ಒಂದಷ್ಟು ಗೊಂದಲಗಳನ್ನು ಮೂಡಿಸಿದೆ.ಇದನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ವಿಶ್ರಾಂತ ಕುಲಪತಿ ಚಂಗಪ್ಪ, ಅಖಿಲ ಭಾರತ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೋಸೆಫ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ