ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ವೇಳೆ ರಿಯಾಯ್ತಿ ದರ ಅನ್ವಯಕ್ಕೆ ಕ್ರಮ: ಇಲಾಖೆಗಳಿಗೆ ಸರ್ಕಾರ ಸೂಚನೆ

ಬೆಂಗಳೂರು, ಅ.27-ಹೊಸದಾಗಿ ಜೆರಾಕ್ಸ್ ಯಂತ್ರ, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ಬೈ ಬ್ಯಾಕ್ ಅಥವಾ ಎಕ್ಸ್‍ಚೇಂಜ್ ಆಫರ್‍ನಲ್ಲಿ, ರಿಯಾಯ್ತಿ ದರದಲ್ಲಿ ಖರೀದಿಸಲು ಎಲ್ಲಾ ಇಲಾಖೆಗಳು ಕ್ರಮಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ.

ಹಳೆಯ ಜೆರಾಕ್ಸ್ ಯಂತ್ರಗಳು, ಕಂಪ್ಯೂಟರ್‍ಗಳು, ಪ್ರಿಂಟರ್‍ಗಳು, ಕುರ್ಚಿಗಳು, ಟೇಬಲ್‍ಗಳು ಸೇರಿದಂತೆ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಹೊಸದಾಗಿ ಖರೀದಿಸುವಾಗಿ ಸಂಬಂಧಪಟ್ಟ ಸರಬರಾಜುದಾರರಿಗೆ ಹಿಂತಿರುಗಿಸಿ ಬೈ ಬ್ಯಾಕ್ ಅಥವಾ ಎಕ್ಸ್‍ಚೇಂಜ್ ಆಫರ್‍ನಲ್ಲಿ ಹೊಸ ವಸ್ತುಗಳನ್ನು ಖರೀದಿಸಲು ಕ್ರಮಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಸೂಚಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್ ಅವರು ಕಳೆದ ತಿಂಗಳು ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಸಚಿವರ ಕಚೇರಿ, ಸಚಿವಾಲಯದ ಎಲ್ಲಾ ಇಲಾಖೆಗಳಲ್ಲಿ ಜೆರಾಕ್ಸ್ ಯಂತ್ರಗಳು, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಉಗ್ರಾಣದಲ್ಲಿಟ್ಟಿರುವುದನ್ನು ಗಮನಿಸಲಾಗಿದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನು ದುರಸ್ತಿಪಡಿಸಿ ಬಳಕೆ ಮಾಡಿಕೊಳ್ಳಲು ಸಂಬಂಧಪಟ್ಟ ತಾಂತ್ರಿಕ ಸಮಾಲೋಚಕರ ಸಲಹೆ ಪಡೆಯಬೇಕು. ಒಂದು ವೇಳೆ ಬಳಕೆಗೆ ಯೋಗ್ಯವಲ್ಲದಿದ್ದರೆ ಹೊಸ ವಸ್ತುಗಳನ್ನು ಖರೀದಿಸುವಾಗ ರಿಯಾಯ್ತಿ ದರದಲ್ಲಿ ಖರೀದಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ