ತಮಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.26- ನನಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆಯಿಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಈಗಾಗಲೇ ಮುಖ್ಯಮಂತ್ರಿಯಾಗಿ ಐದು ವರ್ಷ ಅವಧಿ ಪೂರೈಸಿರುವ ಸಿದ್ದರಾಮಯ್ಯ, ಜೆಡಿಎಸ್-ಕಾಂಗ್ರೆಸ್ ಮೈತ್ತಿ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿಯೇ ಉಳಿದುಕೊಂಡಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬೇಕೆಂದು ಸಚಿವ ಜಮೀರ್‍ಅಹಮ್ಮದ್ ಖಾನ್ ಸೇರಿದಂತೆ ಹಲವಾರು ನಾಯಕರು ಹೇಳಿಕೆ ನೀಡಿದ್ದಾರೆ.

ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ತಮಗೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಜತೆಯಲ್ಲೇ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೋ ಗೊತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿದರೆ ಆಗ ಸಿಎಂ ಹುದ್ದೆ ಬಗ್ಗೆ ಯೋಚನೆ ಮಾಡೋಣ, ಸದ್ಯಕ್ಕೆ ನನಗೆ ಮುಖ್ಯಮಂತ್ರಿಯಾಗಬೇಕೆಂಬ ಬಯಕೆ ಇಲ್ಲ ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

ಚುನಾವಣೆಯಂತಹ ಸೂಕ್ಷ್ಮಕಾಲದಲ್ಲಿ ಇಂತಹ ಹೇಳಿಕೆಗಳು ಭಾರೀ ಪರಿಣಾಮ ಬೀರಲಿದ್ದು, ಸಿದ್ದರಾಮಯ್ಯ ಏಕಾಏಕಿ ಮುಖ್ಯಮಂತ್ರಿ ಹುದ್ದೆಯ ರೇಸ್‍ನಿಂದ ನಿರ್ಗಮಿಸಿರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿಯಾಗಲು ಡಜನ್ ಕಟ್ಟಲೆ ನಾಯಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಸುಮಾರು 30ರಿಂದ 40 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದು ಪಕ್ಷ ನಿಷ್ಠೆ ಹೊಂದಿರುವವರಿಗೆ ಪಕ್ಷದಲ್ಲಿ ಮುಖ್ಯಮಂತ್ರಿಯಾಗುವ ಯೋಗ ಸಿಕ್ಕಿಲ್ಲ. ಕಾಂಗ್ರೆಸ್‍ಗೆ ಬಂದ ಆರು ವರ್ಷದಲ್ಲೇ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ಅದೃಷ್ಟಕ್ಕಾಗಿ ಪಕ್ಷದಲ್ಲಿ ಹಲವಾರು ನಾಯಕರು ಹೊಟ್ಟೆಕಿಚ್ಚುಪಡುತ್ತಿದ್ದಾರೆ. ಹಾಗಿದ್ದೂ ಮತ್ತೊಂದು ಅವಧಿಗೆ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಸಿಎಂ ಮಾಡಬೇಕು ಎಂದು ಬೆಂಬಲಿಗರು ಹೇಳುತ್ತಿರುವುದು ಪಕ್ಷದಲ್ಲಿ ಶೀತಲ ಸಮರಕ್ಕೆ ಕಾರಣವಾಗಿತ್ತು.

ಈ ಸಿದ್ದರಾಮಯ್ಯ ಅವರೇ ನೇರವಾಗಿ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಅಲ್ಲ ಎಂದು ಹೇಳುವ ಮೂಲಕ ಬಹಳಷ್ಟು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದರೆ, ಈ ಹೇಳಿಕೆ ಸಿದ್ದರಾಮಯ್ಯ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿದೆ. ಉಪಚುನಾವಣೆಗಳ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ