ಅರ್ಜುನ್‍ಸರ್ಜಾ ಮೇಲೆ ಮೀ ಟೂ ಆರೋಪ: ನಟಿ ಶೃತಿಹರಿಹರನ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲು

ಬೆಂಗಳೂರು, ಅ.22- ಮೀ ಟೂ ಚಳವಳಿಯಲ್ಲಿ ಅರ್ಜುನ್‍ಸರ್ಜಾ ಮೇಲೆ ಆರೋಪ ಮಾಡಿರುವ ನಟಿ ಶೃತಿಹರಿಹರನ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಲಾಗಿದೆ. ಜತೆಗೆ ಹಿರಿಯ ನಟ ಅಂಬರೀಶ್ ಅವರು ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವ ಸಾಧ್ಯತೆ ಇದೆ.
ಅರ್ಜುನ್‍ಸರ್ಜಾ ಅವರ ಮಾವ ಹಾಗೂ ಹಿರಿಯ ನಟ ರಾಜೇಶ್ ಅವರು ಇಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಶೃತಿಹರಿಹರನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದಿರುವ ಘಟನೆಯನ್ನು ಈಗ ಪ್ರಸ್ತಾಪಿಸಿ ಶೃತಿಹರಿಹರನ್ ದೂರು ನೀಡಿದ್ದಾರೆ. ಎರಡು ವರ್ಷ ಸುಮ್ಮನಿದ್ದು ಈಗ ಏಕಾಏಕಿ ದೂರು ನೀಡಲು ಹೇಗೆ ಸಾಧ್ಯ ? ಇಷ್ಟು ದಿನ ಇಲ್ಲದ ಧೈರ್ಯ ಈಗ ದಿಢೀರ್ ಹೇಗೆ ಬರಲು ಸಾಧ್ಯ? ಅದರ ಹಿಂದೆ ಯಾರು ಇದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಶೃತಿಹರಿಹರನ್ ಅವರ ಆರೋಪ ಒಂದು ಷಡ್ಯಂತ್ರ. ತಮಿಳುನಾಡು, ಪಾಂಡಿಚೇರಿ, ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ಅರ್ಜುನ್‍ಸರ್ಜಾ ಅವರ ತೇಜೋವಧೆ ಮಾಡಲು ವ್ಯವಸ್ಥಿತ ಹುನ್ನಾರ ನಡೆದಿದೆ. ಹಾಗಾಗಿ ನಾನು ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದೇನೆ.

ಅರ್ಜುನ್‍ಸರ್ಜಾ ಅವರ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ ಪ್ರೇಮ ಬರಹ ಚಿತ್ರದಿಂದ ಕೈಬಿಟ್ಟಿದ್ದಕ್ಕಾಗಿ ನಟ ಚೇತನ್ ಅವರು ಶೃತಿಹರಿಹರನ್ ಅವರ ಜತೆ ಸೇರಿ ಸೇಡು ತೀರಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜೇಶ್ ಅವರು, ಇರಬಹುದು. ಯಾವುದೇ ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಕಲಾವಿದರ ಆಯ್ಕೆ ವೇಳೆ ಹಲವಾರು ಪೂರ್ವಭಾವಿ ಪರೀಕ್ಷೆಗಳು ನಡೆಯುತ್ತವೆ. ಅದರಲ್ಲಿ ಆಯ್ಕೆಯಾದರೆ ತೆಗೆದುಕೊಳ್ಳುತ್ತಾರೆ. ಇಲ್ಲವಾದರೆ ಇಲ್ಲ. ಒಂದು ವೇಳೆ ಅವಕಾಶ ಸಿಗದೆ ಇದುದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಮುಂದಾದರೆ ಮುಂದೆ ಒಳ್ಳೆಯ ಅವಕಾಶಗಳು ಸಿಗದೇ ಇರಬಹುದು ಎಂದರು.

ಚಿತ್ರರಂಗದಲ್ಲಿ ಮಡಿವಂತಿಕೆ, ಮೈಲಿಗೆಯಾಗಲಿ ಇಲ್ಲ. ಇವರೆಡರ ನಡುವೆ ಅಭಿನಯ ಇದೆ. ತನ್ಮಯತೆ, ತಲ್ಲೀನತೆ, ಭಾವಾಭಿನಯ ಬಹಳ ಮುಖ್ಯ. ಕಲಾವಿದರ ಅದನ್ನು ಅರ್ಥ ಮಾಡಿಕೊಂಡು ಪಾತ್ರ ಮಾಡಬೇಕು ಎಂದು ಹೇಳಿದರು.
ಪ್ರಕಾಶ್ ರೈ ಅವರ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ವಾಣಿಜ್ಯ ಮಂಡಳಿ ಚಿತ್ರರಂಗದ ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಂಸ್ಥೆಯಾಗಿದೆ.ಅದರ ಅಧ್ಯಕ್ಷರಾಗಿರುವ ಚಿನ್ನೇಗೌಡರು ಚಿತ್ರರಂಗದ ಬಗ್ಗೆ ಆಮೂಲಾಗ್ರ ಮಾಹಿತಿ ಹೊಂದಿದ್ದಾರೆ.

ಈ ಮೊದಲು ಶೃತಿ ಹರಿಹರನ್ ಅವರು ಅರ್ಜುನ್‍ಸರ್ಜಾ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಎರಡು ವರ್ಷ ಸುಮ್ಮನಿದ್ದು ಈಗ ದೂರು ನೀಡುತ್ತಿರುವುದು ಏಕೆ ? ಇದರ ತನಿಖೆ ನಡೆಸುವುದು ಹೇಗೆ ಎಂದು ವಾಣಿಜ್ಯ ಮಂಡಳಿಯವರು ಪ್ರಶ್ನಿಸಿದಾಗ, ಆಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂದು ನಾನು ಪ್ರಕರಣದ ಬಗ್ಗೆ ವಾಣಿಜ್ಯ ಮಂಡಳಿಗೆ ದೂರು ನೀಡುತ್ತಿದ್ದೇನೆ ಎಂದು ರಾಜೇಶ್ ತಿಳಿಸಿದ್ದಾರೆ.

ಬುರ್ಕಾ ಹಾಕಿಕೊಂಡು ಬಂದು ಆರೋಪ ಮಾಡುವವ ಫೋನ್ ನಂಬರ್, ವಿಳಾಸ ಕೊಡಿ, ನಾನು ಲಾಯರ್ ಅವರನ್ನು ಸಂಪರ್ಕಿಸುತ್ತೇನೆ. ಕೋರ್ಟ್‍ನಲ್ಲಿ ಅವರ ಬುರ್ಕಾ ಬಿಚ್ಚಿಸುತ್ತೇನೆ ಎಂದು ಹೇಳಿದರು.

ಈ ನಡುವೆ ರಾಜ್ಯ ಪುರುಷರ ರಕ್ಷಣಾ ಸಮಿತಿ ಹಾಗೂ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಮೀ ಟೂ ಚಳವಳಿಯಲ್ಲಿ ಕಾಣಿಸಿಕೊಂಡಿರುವ ನಟಿಯರಾದ ಸಂಜನಾ, ಶೃತಿಹರಿಹರನ್ ಮತ್ತು ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಈ ನಡುವೆ ಹಿರಿಯ ನಟ ಅಂಬರೀಶ್ ಅವರು ಪ್ರಕರಣವನ್ನು ಇತ್ಯರ್ಥ ಪಡಿಸಲು ಸಾಧ್ಯತೆ ಇದ್ದು, ಕಲಾವಿದರ ಸಂಘ ಅಂಬರೀಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಜತೆಗೆ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಸಂಜೆ ನಾಲ್ಕು ಗಂಟೆಗೆ ಸಭೆ ಕರೆದಿದ್ದು, ಅಲ್ಲಿ ಪರ, ವಿರೋಧದ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ವಾಣಿಜ್ಯ ಮಂಡಳಿಯ ಮುಖಂಡರು ನಟ ಅಂಬರೀಶ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ