ಇಂದಿನ ಪತ್ರಕರ್ತರಲ್ಲಿ ಓದಿನ ಕೊರತೆ ಕಾಣುತ್ತಿದೆ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ

ಬೆಂಗಳೂರು, ಅ.21- ಪತ್ರಕರ್ತರು ಆಗಾಗ ತಮ್ಮೊಳಗನ್ನು ಸ್ವಚ್ಛಗೊಳಿಸಿಕೊಂಡರೆ ಮಾತ್ರ ನಿಷ್ಪಕ್ಷಪಾತ ಮತು ್ತ ವಸ್ತುನಿಷ್ಠ ಸುದ್ದಿಗಳನ್ನು ಕೊಡಲು ಸಾಧ್ಯ. ಇಂದಿನ ಪತ್ರಕರ್ತರಲ್ಲಿ ಓದಿನ ಕೊರತೆ ಕಾಣುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ವಿಷಾದಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿಂದು ಎಂ.ವ್ಯೂಮಕೇಶ ಅವರ ಬ್ರೇಕಿಂಗ್ ನ್ಯೂಸ್ ಮರ್ಮ, ಟಿಆರ್‍ಪಿ ಮಂತ್ರ ಹಾಗೂ ಸುದ್ದಿಮನೆ ಸ್ವಾರಸ್ಯಗಳು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಹಿತ್ಯ ಓದಿನಿಂದ ಮಾನವೀಯತೆ ಬೆಳೆಯುತ್ತದೆ. ಮಾನವೀಯ ದೃಷ್ಟಿಕೋನದಲ್ಲಿ ಬರೆಯುವ ಸುದ್ದಿಗಳು ಸಮಾಜಕ್ಕೆ ಪೂರಕವಾಗಿರುತ್ತವೆ ಎಂದು ಹೇಳಿದ ಅವರು, ಇತ್ತೀಚಿನ ಪತ್ರಕರ್ತರಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ ಪ್ರವೃತ್ತಿ ಕಡಿಮೆ ಇದೆ. ಪತ್ರಕರ್ತರು ಕೂಡ ಆತ್ಮವಿಮರ್ಶೆ ಮಾಡಿಕೊಂಡು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಎಂ.ವ್ಯೂಮಕೇಶ ಅವರ ಈ ಪುಸ್ತಕದಲ್ಲಿ, ಸುದ್ದಿ ವಾಹಿನಿಗಳ ಟಿಆರ್‍ಪಿ, ಸುದ್ದಿ ವಾಚಕನ ತಪ್ಪು-ಹಾಸ್ಯ ಹಾಗೂ ಈ ಸುದ್ದಿ ವಾಹಿನಿಗಳು ಹೇಗೆ, ಕಾರ್ಯ ನಿರ್ವಹಿಸುತ್ತವೆ ಎಂದೆಲ್ಲಾ ಅಂಶಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿಯ ಪುಸ್ತಕಗಳನ್ನು ಎಲ್ಲರೂ ಓದುವಂತೆ ಆಗಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಗೌರಿಶ್ ಅಕ್ಕಿ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದ ಮುಖವಾಣಿಗಳಾಗಿ, ನ್ಯೂಸ್ ಚಾನೆಲ್ ಕೆಲಸ ಮಾಡುತ್ತೀವೆ. ಆದರೆ, ಮುಂದಿನ ದಿನಗಳಲ್ಲಾದರೂ, ಸುದ್ದಿ ವಾಹಿನಿಗಳು, ಓರ್ವ ವ್ಯಕ್ತಿ, ಪಕ್ಷದ ಪರವಾಗಿ ನಿಲ್ಲುವುದು ಬಿಟ್ಟು, ಸಮಾಜ ಪರವಾಗಿ ಮಾತನಾಡಬೇಕು ಎಂದು ತಿಳಿಸಿದರು.

ಪತ್ರಕರ್ತ ದೀಪಕ್ ತಿಮ್ಮಯ್ಯ, ಪತ್ರಕರ್ತರು, ಸಮಾಜ ಸುಧಾರಣೆ ಮಾಡುವ ಅಗತ್ಯವಿಲ್ಲ. ಬದಲಾಗಿ, ಜನರಿಗೆ ಸತ್ಯದ ಮಾಹಿತಿ ತಲುಪಿಸಿದರೆ, ಸಾಕು. ಸುದ್ದಿ ವಾಹಿನಿಗಳು ವೀಕ್ಷಕರನ್ನು ದಿಕ್ಕು ತಪ್ಪಿಸುವುದನ್ನು ಬಿಡಬೇಕು. ಸಾಮಾಜಿಕ ಸಮಸ್ಯೆಗಳ ಕುರಿತು ಮಾತನಾಡಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಲೇಖಕ ಎಂ.ವ್ಯೂಮಕೇಶ, ಕಿರುತೆರೆ ನಟ ರೆಹಮಾನ್ ಹಸನ್, ಶೀತಲ್ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ