ವಿಮೋಚನಂ – The End Of Total Lunar Eclipse!

ಆತ್ಮೀಯ ದೇಶಭಕ್ತ ಬಂಧುಗಳೇ,

(ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸುಭಾಷರನ್ನು ದೇಶದ ಮೊದಲ ಪ್ರಧಾನಿ ಅಂತ ಹೆಚ್ಚು ಕಡಿಮೆ ಘೋಷಣೆ ಮಾಡುವ ಎದೆಗಾರಿಕೆ ತೋರಿದೆ. ಆಜಾದ್ ಹಿಂದ್ ಸರ್ಕಾರದ 75 ನೆಯ ಸ್ಥಾಪನಾ ದಿವಸದ ಪ್ರಯುಕ್ತ ಕೆಂಪು ಕೋಟೆಯ ಮೇಲೆ ದೇಶದ ಪ್ರಧಾನಿ ಧ್ವಜಾರೋಹಣ ನಡೆಸಲಿದ್ದಾರೆ. ಈ ಐತಿಹಾಸಿಕ ದಿನಕ್ಕಾಗಿ ನಾವೆಲ್ಲರೂ ಕಾದು ಕುಳಿತಿದ್ದೆವು. ಹಿಂದೆ ಈ ಕುರಿತಾಗಿ ಚಳುವಳಿಯನ್ನೂ ಸಂಘಟಿಸಿ ಜನಜಾಗೃತಿ ಮೂಡಿಸಿ ಸರ್ಕಾರದ ಮೇಲೆ ಒತ್ತಡವನ್ನೂ ಹೇರಿದ್ದೆವು. ಇದೀಗ ಆ ಬೇಡಿಕೆ ಭಾಗಶಃ ನೆರವೇರುತ್ತಿದೆ. ಹೀಗಾಗಿ ಅಕ್ಟೋಬರ್ 21 ಕ್ಕೆ ಅಲ್ಲಿ ದಿಲ್ಲಿಯಲ್ಲಿ ಮೋದಿ ನೇತಾಜಿಗೆ ಗೌರವ ಸಮರ್ಪಿಸಿದರೆ, ಇಲ್ಲಿ ನಾವೂ ಸಹಾ ಸಂಭ್ರಮ ಆಚರಿಸಿ ದೇಶದ ಮೊದಲ ಪ್ರಧಾನಿಗೆ ಗೌರವ ಸಲ್ಲಿಸೋಣ.)

ಆತ್ಮೀಯ ದೇಶಭಕ್ತ ಬಂಧುಗಳೇ,

ಸುಭಾಷ್ ಚಂದ್ರ ಬೋಸರು ಈ ದೇಶದ ಮಹಾನ್ ನಾಯಕರುಗಳಲ್ಲಿ ಅಗ್ರಗಣ್ಯರು. ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರೂ ಸಹಾ ಸ್ವಾತಂತ್ರ್ಯಾನಂತರ ಅಧಿಕಾರ ಹಿಡಿದ ಸ್ವಾರ್ಥಿಗಳಿಂದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಇತಿಹಾಸದ ಪುಟಗಳಿಂದ ಅಳಿಸಿಹೋದ ನಾಯಕರಾಗಿದ್ದಾರೆ. (Forgotten Hero) ಸುಭಾಷ್ ಚಂದ್ರ ಬೋಸರು ಇಂಡಿಯನ್ ನ್ಯಾಶನಲ್ ಆರ್ಮಿ (ಐ ಎನ್ ಎ) ಯನ್ನು ಕಟ್ಟದೇಹೋಗಿದ್ದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಅದಿನ್ನೆಷ್ಟು ವರ್ಷಗಳು ತಡವಾಗುತ್ತಿತ್ತೋ? “ನೀವು ನನಗೆ ನಿಮ್ಮ ರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ.” ಎಂದು ಅವರು ನೀಡಿದ ವೀರೋಚಿತ ಕರೆಗೆ ಓಗೊಟ್ಟು ಲಕ್ಷಾಂತರ ಜನರು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿದರೆಂದರೆ ಸುಭಾಷರ ವ್ಯಕ್ತಿತ್ವ ಅದೆಂಥಾ ಅಪರೂಪದ್ದೆಂದು ನಾವು ಊಹಿಸಬೇಕು.

ಸ್ವಾತಂತ್ರ್ಯಾನಂತರ ನಮ್ಮ ದೇಶದ ಆದರ್ಶ ಪುರುಷ ಸುಭಾಷ್ ಚಂದ್ರರಾಗಿರಬೇಕಿತ್ತು. ಆದರೆ ದುರದೃಷ್ಟವಶಾತ್ ಈ ಮಹಾನ್ ನಾಯಕನ ತ್ಯಾಗ ಬಲಿದಾನಗಳು ಇತಿಹಾಸದಲ್ಲಿ ದಾಖಲಾದರೆ ಅದನ್ನು ಮುಂದಿನ ಪೀಳಿಗೆಯ ಮಕ್ಕಳು ಓದಿದರೆ ನಮ್ಮ ವಂಶಪಾರಂಪರ್ಯ ರಾಜಕಾರಣಕ್ಕೆ ಅದೆಲ್ಲಿ ಅಡ್ಡಿಯಾಗುವುದೋ ಎಂಬ ಕಾರಣಕ್ಕೆ ಕೆಲವು ಸ್ವಾರ್ಥಿಗಳು ಸುಭಾಷರ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು, ಸುಭಾಷ್ ಚಂದ್ರರ ವ್ಯಕ್ತಿತ್ವಕ್ಕೆ ಗ್ರಹಣ ಹಿಡಿಸಿಬಿಟ್ಟರು. ಸುಭಾಷ್ ಚಂದ್ರ ಬೋಸ್ ಮತ್ತು ಐ ಎನ್ ಎ ಕುರಿತಂತೆ ಪಠ್ಯ ಪುಸ್ತಕಗಳಲ್ಲಿನ ಪಾಠಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಯಿತು. ಇದರಿಂದಾಗಿ ಇಂದಿನ ಪೀಳಿಗೆಗೆ ಅವರ ತ್ಯಾಗ ಬಲಿದಾನದ ಪರಿಚಯವೇ ಇಲ್ಲವಾಗಿದೆ.

ನೀವೇ ಹೇಳಿ ಈ ಕೆಳಕಂಡ ಸತ್ಯಗಳು ಎಷ್ಟು ಜನರಿಗೆ ಗೊತ್ತು?

* ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಿದ್ದು ಸುಭಾಷ್ ಚಂದ್ರಬೋಸ್.
* ಭಾರತದ ಪ್ರಪ್ರಥಮ ಪ್ರಧಾನಮಂತ್ರಿ ಸುಭಾಷ್ ಚಂದ್ರ ಬೋಸ್.
* ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಬ್ರಿಟಿಷರಿಂದ ಕಸಿದುಕೊಂಡು ಅದಕ್ಕೆ ಶಹೀದ್ ಮತ್ತು ಸ್ವರಾಜ್ ಎಂದು ಹೆಸರಿಟ್ಟ ಸಾಹಸಿ ಸುಭಾಷ್ ಚಂದ್ರ ಬೋಸ್.
* ವಿದೇಶಗಳಲ್ಲಿದ್ದುಕೊಂಡು ಸೈನ್ಯವನ್ನು ಸಂಘಟಿಸಿ ಬ್ರಿಟೀಷರ ತೆಕ್ಕೆಯಲ್ಲಿದ್ದ ಮಣಿಪುರ, ನಾಗಾಲ್ಯಾಂಡ್ ಗಳನ್ನು ವಶಪಡಿಸಿಕೊಂಡ ಮಹಾನ್ ಸೇನಾನಾಯಕ ಸುಭಾಷ್ ಚಂದ್ರ ಬೋಸ್.
* ಎರಡನೆಯ ಮಹಾ ಯುದ್ಧದ ಕಾಲದಲ್ಲಿ ಹಿಟ್ಲರ್ ಮುಸಲೋನಿಯಂಥಾ ಸರ್ವಾಧಿಕಾರಿಗಳ ಎದುರು ದಿಟ್ಟತನದಿಂದ ಮಿಲಿಟರಿ ಸಹಕಾರ ಕೇಳಿದ ಗಂಡುಗಲಿ ಸುಭಾಷ್ ಚಂದ್ರ ಬೋಸ್.
* ಎಲ್ಲರೂ ಹೇಳುವಂತೆ ವಿಮಾನ ಅಪಘಾತದಲ್ಲಿ ಮೃತಪಟ್ಟವರಲ್ಲ ಸುಭಾಷ್ ಚಂದ್ರ ಬೋಸ್.
* ಭಾರತ ರತ್ನವಾಗಿದ್ದರೂ ಭಾರತ ರತ್ನ ಪ್ರಶಸ್ತಿ ಪಡೆಯದ ನತದೃಷ್ಟ ಸುಭಾಷ್ ಚಂದ್ರ ಬೋಸ್.
* ಸ್ವಾರ್ಥಿಗಳ ರಾಜಕೀಯ ಲಾಲಸೆಗೆ ಬಲಿಯಾದ ನಾಯಕ ಸುಭಾಷ್ ಚಂದ್ರ ಬೋಸ್.

ಇವುಗಳು ಕೆಲವು ಸ್ವಾರ್ಥಿಗಳು ಉದ್ದೇಶಪೂರ್ವಕವಾಗಿ ಸಮಾಧಿ ಮಾಡಿರುವ ಸುಭಾಷರ ಕುರಿತಾದ ಅನೇಕ ಸತ್ಯಗಳ ಸ್ಯಾಂಪಲ್ ಗಳಷ್ಟೇ. ಇಂಥಾ ಅನೇಕ ಸ್ಫೋಟಕ ಸತ್ಯಗಳು ತೆರೆಯ ಮರೆಯಲ್ಲಿ ಹುದುಗಿವೆ. ದೇಶವಾಸಿಗಳಿಗೆ ಈ ಎಲ್ಲ ಸತ್ಯಗಳನ್ನು ಇಂದಾದರೂ ತಿಳಿಸಬೇಡವೇ? ನಮ್ಮ ಮಕ್ಕಳು ಇನ್ನೂ ಅದೆಷ್ಟು ದಿನ ನಿಜವಾದ ಇತಿಹಾಸ ಓದುವುದರಿಂದ ವಂಚಿತರಾಗಬೇಕು?

ಸಾಕು! ಇನ್ನು ಸಾಕು! ಬನ್ನಿ ಗೆಳೆಯರೇ, ಬನ್ನಿ ಒಡನಾಡಿಗಳೇ, ಬನ್ನಿ ದೇಶಭಕ್ತರೇ! ಬನ್ನಿ ಕೆಚ್ಚಿನ ಕಿಡಿಗಳೇ! ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಸುಭಾಷರ ಕುರಿತಾದ ಸತ್ಯಸಂಗತಿಗಳನ್ನು ಜನಮಾನಸಕ್ಕೆ ತಲುಪಿಸೋಣ. ಪೂರ್ಣ ಚಂದ್ರನಂಥಾ ದಿವ್ಯ ವ್ಯಕ್ತಿತ್ವದ ಸುಭಾಷ್ ಚಂದ್ರ ಬೋಸರಿಗೆ ಹಿಡಿದಿರುವ ಗ್ರಹಣದಿಂದ ಅವರನ್ನು ವಿಮೋಚನೆಗೊಳಿಸೋಣ. ಗ್ರಹಣದ ಕತ್ತಲಿನಿಂದ ಮುಕ್ತಿಯ ಬೆಳಕಿನೆಡೆಗೆ ಕರೆದು ತರೋಣ. ಅದಕ್ಕಾಗಿ ವಿವೇಕ ಶಿಕ್ಷಣ ವಾಹಿನಿ ಒಂದು ವಿಶಿಷ್ಟ ಹೆಜ್ಜೆಯನ್ನು ಮುಂದಿಡಲು ಸುಭಾಷರ ಅಭಿಮಾನಿಗಳಿಗೆಲ್ಲಾ ಮುಕ್ತ ಆಹ್ವಾನ ನೀಡುತ್ತಿದೆ.

ಈ ವರ್ಷ ಅಕ್ಟೋಬರ್ 21 ಕ್ಕೆ ಸುಭಾಷ್ ಚಂದ್ರ ಬೋಸರು ಐ ಎನ್ ಎ ಸ್ಥಾಪಿಸಿ ಮತ್ತು ಭಾರತದ ಆಜಾದ್ ಹಿಂದ್ ಸರ್ಕಾರದ ಪ್ರಥಮ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 75 ವರ್ಷಗಳು ತುಂಬುತ್ತದೆ. ಇಂಥಾ ವಿಶೇಷ ಸಂದರ್ಭದಲ್ಲಿ ವಿವೇಕ ಶಿಕ್ಷಣ ವಾಹಿನಿಯು ರಾಜ್ಯದಾದ್ಯಂತ “ವಿಮೋಚನಂ” ಎಂಬ ಹೆಸರಿನ ವಿಶಿಷ್ಟ ಉಪಾಯಗಳನ್ನೊಳಗೊಂಡ ಯೋಜನೆಯೊಂದನ್ನು ನಿಮ್ಮ‌ ಮುಂದೆ ಇರಿಸುತ್ತಿದೆ. ಈ ಯೋಜನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ನಾವೆಲ್ಲರೂ ನಮ್ಮ ಊರುಗಳಲ್ಲಿ ಆಚರಣೆಗೆ ತರಲು ಪ್ರಯತ್ನಿಸೋಣ ಎಂಬುದೇ ನಮ್ಮ ಕಳಕಳಿಯ ಮನವಿ.

ಏನಿದು ವಿಮೋಚನಂ??

ಪೂರ್ಣ ಚಂದ್ರನಂಥಾ ದಿವ್ಯ ವ್ಯಕ್ತಿತ್ವವಾದ ಸುಭಾಷ್ ಚಂದ್ರ ಬೋಸರ ವ್ಯಕ್ತಿತ್ವಕ್ಕೆ ಸ್ವಾರ್ಥಿಗಳು ಉದ್ದೇಶ ಪೂರ್ವಕವಾಗಿ ಹಿಡಿಸಿದ ಗ್ರಹಣಕ್ಕೆ ಬಿಡುಗಡೆ ಕೊಡಿಸಿ. ಸತ್ಯದ ಬೆಳಕನ್ನು ಜನಮಾನಸಕ್ಕೆ ತಲುಪಿಸುವುದೇ ವಿಮೋಚನಂ! ಇದು ಇಡಿಯ ವರ್ಷ ಪೂರ್ತಿ ನಡೆಯುವ ಕಾರ್ಯಕ್ರಮ – ಯೋಜನೆಯಾಗಿರುತ್ತದೆ.

ಏನು ಮಾಡಬೇಕು?

1. ಅಕ್ಟೋಬರ್ 21 ರಂದು ಸುಭಾಷ್ ಚಂದ್ರ ಬೋಸರು ಆಜಾದ್ ಹಿಂದ್ ಸರ್ಕಾರ ರಚಿಸಿ 75 ವರ್ಷಗಳು ತುಂಬುತ್ತವೆ. ಇದರ ಪ್ರಯುಕ್ತ ಅವರ 7.5 ಅಡಿ ಎತ್ತರದ ಸುಭಾಷರ ಕಟೌಟ್/ ಫ್ಲೆಕ್ಸ್ ಗಳನ್ನು ನಮ್ಮ ಊರಿನ ಪ್ರಮುಖ ವೃತ್ತಗಳಲ್ಲಿ, ರಸ್ತೆಗಳಲ್ಲಿ, ಕಟ್ಟಡಗಳ ಮೇಲೆ, ಅಂಗಡಿಗಳ ಎದುರು, ಕಛೇರಿಗಳ ಮೇಲೆ ಸ್ಥಾಪಿಸಬೇಕು. ಅದರ ಮೇಲೆ Netaji – The First Prime Minister Of India ಎಂದು ದಪ್ಪ ಅಕ್ಷರಗಳಲ್ಲಿ ಬರೆದಿರಬೇಕು. (ಈ ಭಾವಚಿತ್ರದ ವರ್ಣರಂಜಿತ ಡಿಸೈನ್ ಅನ್ನು ವಿವೇಕ ಶಿಕ್ಷಣ ವಾಹಿನಿಯ ವತಿಯಿಂದ ಕಳುಹಿಸಿಕೊಡಲಾಗುವುದು. ಈ ಕೆಲಸವನ್ನು ಅಕ್ಟೋಬರ್ 21 ರಂದೂ ಮಾಡಬಹುದು ಹಾಗೆಯೇ ಇಡೀ ವರ್ಷ ಪೂರ್ತಿ ಯಾವಾಗ ಬೇಕಿದ್ದರೂ ಆಚರಿಸಬಹುದು)

2. ಸ್ಥಾಪಿಸಿದ ಭಾವಚಿತ್ರಕ್ಕೆ ನಿಗದಿತ ಸಮಯದಲ್ಲಿ ಸಾರ್ವಜನಿಕರು ಬಂದು ಪುಷ್ಪಾರ್ಚನೆ, ದೀಪ ಪ್ರಜ್ವಲನೆ ಮುಂತಾದ ಗೌರವ ಸೂಚಕ ಕಾರ್ಯಗಳನ್ನು ಮಾಡಬೇಕು. ಸಾರ್ವಜನಿಕರಿಗೆ ಸಿಹಿ ವಿತರಣೆಯ ವ್ಯವಸ್ಥೆಯನ್ನು ಸಂಘಟಕರು ಮಾಡಬೇಕು. ಅದಕ್ಕೆ ಬೇಕಾದ ಪೂರ್ವ ಪ್ರಚಾರವನ್ನು ವ್ಯಾಪಕವಾಗಿ ಮಾಡಿರಬೇಕು.

3. ನೇತಾಜಿಯವರ ಆಕರ್ಷಕ ಭಾವಚಿತ್ರ ಮತ್ತು “Netaji – The First Prime Minister Of India” ಎಂದು ಬರೆದಿರುವ ಟೀ ಷರ್ಟ್ ಗಳನ್ನು ಯುವಕರು ಧರಿಸಬೇಕು.

4. ಕಾರ್ಯಕ್ರಮದ ಸ್ಥಳದಲ್ಲಿ ಸುಭಾಷ್ ಚಂದ್ರ ಬೋಸರ ಕುರಿತಾದ ಮತ್ತಿತರ ದೇಶಭಕ್ತಿ ಗೀತೆಗಳನ್ನು ಹಿನ್ನೆಲೆಯಲ್ಲಿ ಪ್ರಸಾರ ಮಾಡಬಹುದು. (ಬೇಕಿದ್ದರೆ ಅಂಥಾ ಗೀತೆಗಳನ್ನು ನಾವು ಕಳುಹಿಸಿಕೊಡುತ್ತೇವೆ.)

5. ನೇತಾಜಿಯವರ ಜೀವನದ ಕುರಿತಾಗಿ ಮುಚ್ಚಿಟ್ಟ ಸತ್ಯ ಸಂಗತಿಗಳನ್ನು ಪ್ರಖರ ರಾಷ್ಟ್ರವಾದಿ ವಾಗ್ಮಿಗಳ ಮೂಲಕ ಜನರ ಮುಂದೆ ಬಿಚ್ಚಿಡುವ ಪರಿಣಾಮಕಾರಿ ಉಪನ್ಯಾಸವನ್ನು “ವಿಮೋಚನಂ – ‘ಚಂದ್ರ’ಗ್ರಹಣ ವಿಮೋಚನೆ” The End Of Total Lunar Eclipse! ಎಂಬ ಹೆಸರಿನಲ್ಲಿ ಆಯೋಜಿಸಬಹುದು.

6. ಸುಭಾಷ್ ಅಭಿಮಾನಿಗಳು ತಮ್ಮ ಬೈಕುಗಳ ಮೇಲೆ, ಆಟೋಗಳ ಮೇಲೆ, ವಾಹನಗಳ ಮೇಲೆ ಸುಭಾಷರ ಚಿತ್ರಗಳನ್ನು ಸ್ಥಳದಲ್ಲೇ ಅಂಟಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಬಹುದು.

6. ಪ್ರೊಜೆಕ್ಟರ್ ಮೂಲಕ ನೇತಾಜಿಯವರಿಗೆ ಸಂಬಂಧಿಸಿದ ಚಲನಚಿತ್ರ ಪ್ರದರ್ಶನ ಮಾಡಬಹುದು. ಬೋಸ್ ದಿ ಫರ್ಗಾಟನ್ ಹೀರೋ, ಬೋಸ್ ಡೆಡ್/ಅಲೈವ್, ಇತ್ಯಾದಿ ಸಿನಿಮಾಗಳು ಮತ್ತು ಅನೇಕ ಡಾಕ್ಯುಮೆಂಟರಿಗಳು ಲಭ್ಯವಿದೆ. (ಬೇಕಿದ್ದರೆ ನಾವು ಅವುಗಳನ್ನು ಕಳುಹಿಸಿಕೊಡುತ್ತೇವೆ.)

7. ನೇತಾಜಿಯವರ ಅಪರೂಪದ ಭಾವಚಿತ್ರಗಳನ್ನು ಮುದ್ರಿಸಿ ಕಾರ್ಯಕ್ರಮದ ಸ್ಥಳದಲ್ಲಿ ಅವುಗಳ ಪ್ರದರ್ಶನ ಮಾಡಬಹುದು. (ಬೇಕಿದ್ದರೆ ನೇತಾಜಿಯವರ ಅಪರೂಪದ ಭಾವಚಿತ್ರಗಳನ್ನು ನಾವು ಕಳುಹಿಸಿಕೊಡುತ್ತೇವೆ.)

8. ನೇತಾಜಿಯವರ ಕುರಿತಾದ ಪುಸ್ತಕಗಳ, ಉಪನ್ಯಾಸಗಳ ಸಿಡಿಗಳ ಪ್ರದರ್ಶನವನ್ನು ಹಮ್ಮಿಕೊಳ್ಳಬಹುದು. (ಬೇಕಿದ್ದರೆ ನೇತಾಜಿಯವರ ಕುರಿತಾದ ಪುಸ್ತಕ ಇತ್ಯಾದಿಗಳನ್ನು ನಾವು ಕಳುಹಿಸಿಕೊಡುತ್ತೇವೆ.)

9. ಇಂಡಿಯನ್ ನ್ಯಾಷನಲ್ ಆರ್ಮಿಯ ಧ್ಯೇಯ ಗೀತೆಯಾದ “ಕದಮ್ ಕದಮ್ ಬಡಾಯೇಜಾ” ಹಾಡನ್ನು ನಮ್ಮ ಮೊಬೈಲ್ ನ ರಿಂಗ್ ಟೋನ್ ಮತ್ತು ಹಲೋ ಟ್ಯೂನ್ ಗಳನ್ನಾಗಿ ಬಳಸುವಂತೆ ಕರೆ ನೀಡಬಹುದು. ಬೇರೆಯವರಿಗೂ ಅದನ್ನು ಬಳಸುವಂತೆ ಹೇಳಲು ಪ್ರಚಾರ ಮಾಡಲು ಜನರನ್ನು ಪ್ರೇರೇಪಿಸಬಹುದು.

10. ಕಾರ್ಯಕ್ರಮಕ್ಕೆ ಬಂದ ಮಕ್ಕಳಿಗೆ/ ಸಾರ್ವಜನಿಕರಿಗೆ ಸ್ಥಳದಲ್ಲೇ ಮೌಖಿಕ ಅಥವಾ ಲಿಖಿತ ರಸಪ್ರಶ್ನೆ ಸ್ಪರ್ಧೆ, ಸುಭಾಷರ ಕುರಿತಾದ ಚಿತ್ರಕಲೆ ಸ್ಪರ್ಧೆ, ಕಿರು ಭಾಷಣ ಸ್ಪರ್ಧೆ, ಕದಂ ಕದಂ ಬಡಾಯೇಜಾ ಗಾಯನ ಸ್ಪರ್ಧೆ ಗಳನ್ನು ಏರ್ಪಡಿಸಿ, ಬಹುಮಾನವಾಗಿ ಸುಭಾಷ್ ಚಂದ್ರ ಬೋಸರ ಜೀವನ ಚರಿತ್ರೆಯನ್ನು ಕೊಡಬಹುದು. (ಇದಕ್ಕೆ ಬೇಕಾದ ಮಾಹಿತಿ, ಆಡಿಯೋ, ಪುಸ್ತಕ, ಕರಪತ್ರ, ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸುವ ಜವಾಬ್ದಾರಿ ವಿವೇಕ ಶಿಕ್ಷಣ ವಾಹಿನಿಯದು.)

11. ಸಾರ್ವಜನಿಕರು ಸೆಲ್ಫಿ ವಿತ್ ಫಸ್ಟ್ ಪ್ರೈಮ್ ಮಿನಿಸ್ಟರ್ ಅನ್ನೋ ಹ್ಯಾಶ್ ಟ್ಯಾಗ್ ಅಡಿಯಲ್ಲಿ ನೀವು ಸ್ಥಾಪಿಸಿರುವ ಸುಭಾಷರ 7.5 ಅಡಿ ಎತ್ತರದ ಕಟೌಟ್/ಫ್ಲೆಕ್ಸ್ ನ ಎದುರಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಡೇಟ್ ಮಾಡಬಹುದು.

12. ಅಕ್ಟೋಬರ್ 21 ರಂದು ಆಜಾದ್ ಹಿಂದ್ ಸರ್ಕಾರದ ಸ್ಥಾಪನೆಯ ಸವಿನೆನಪಿಗೆ #NetajiTheFirstPrimeMinisterOfIndia ಅಂತ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಟ್ರೆಂಡ್ ಮಾಡಬಹುದು.

13. ಕಾರ್ಯಕ್ರಮದ ಸ್ಥಳದಲ್ಲಿ ಸುಭಾಷರ ಕುರಿತಾದ ಪುಸ್ತಕಗಳು, ಭಾವಚಿತ್ರಗಳು, ಟೀ ಶರ್ಟ್, ಕೀ ಬಂಚ್, ಸ್ಟಿಕ್ಕರ್ಸ್, ಕಾರ್ಡ್ಸ್, ಉಪನ್ಯಾಸಗಳ ಸಿಡಿಗಳ ಮಾರಾಟದ ವ್ಯವಸ್ಥೆ ಮಾಡಬಹುದು.

14. ಕಾರ್ಯಕ್ರಮದ ಕೊನೆಯಲ್ಲಿ ಆಜಾದ್ ಹಿಂದ್ ಫೌಜ್ ಅಥವಾ ಐ ಎನ್ ಎ ಯ ಗೀತೆಯಾಗಿದ್ದ “ಕದಂ ಕದಂ ಬಡಾಯೆಜಾ” ಮತ್ತು ರಾಷ್ಟ್ರಗೀತೆಯನ್ನು ಹಾಡಿ ನೇತಾಜಿಯವರ ಮೆಚ್ಚಿನ ಘೋಷಣೆ ಜೈ ಹಿಂದ್ ಮತ್ತು ಭಾರತ್ ಮಾತಾ ಕೀ ಜೈ ಅನ್ನು ಒಕ್ಕೋರಲಿನಿಂದ ಘೋಷಿಸಬೇಕು.

ಇದಿಷ್ಟು ಜನಮಾನಸಕ್ಕೆ ಸುಭಾಷರ ನೆನಪು ಮೂಡಿಸಲು ಮಾಡಬಹುದಾದ ಕೆಲವು ಉಪಾಯಗಳಷ್ಟೇ. ಈ ಮೇಲಿನ ಅಂಶಗಳಲ್ಲಿ ಒಂದನ್ನು ನಾವು ಪಾಲಿಸಿದರೂ ಸುಭಾಷರಿಗಾದ ಅನ್ಯಾಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದಂತಾಗುತ್ತದೆ. ಇಂದಿನ ನಮ್ಮ ಪ್ರಯತ್ನಗಳಿಂದ ಸುಭಾಷರ ವ್ಯಕ್ತಿತ್ವ ಜನಮಾನಸಕ್ಕೆಲ್ಲಾ ತಲುಪಿಬಿಡದೇ ಇರಬಹುದು. ಆದರೆ ನೆನಪಿಡಿ 75 ವರ್ಷಗಳ ಸುದೀರ್ಘ ಕಾಲ ಚಂದ್ರನಿಗೆ ಹಿಡಿದುಕೊಂಡಿದ್ದ ಗ್ರಹಣವನ್ನು ವಿಮೋಚಿಸುವ ಮಹತ್ಕಾರ್ಯಕ್ಕೆ ನಾವುಗಳೆಲ್ಲಾ ನಾಂದಿ ಹಾಡಲಿದ್ದೇವೆ ಮತ್ತು ಒಂದಲ್ಲಾ ಒಂದು ದಿನ ನೇತಾಜಿ ಎಂಬ ಪೂರ್ಣ ಚಂದ್ರನ ಮೇಲಿನ ಕತ್ತಲೆ ಕಳೆದು ಬೆಳಕು ಮೂಡಿಯೇ ಮೂಡುತ್ತದೆ ಎಂಬುದು ಮಾತ್ರ ಸೂರ್ಯನ ಬೆಳಕಿನಷ್ಟೇ ಸತ್ಯ.

ಬನ್ನಿ, ರಾಷ್ಟ್ರ ಬಂಧುಗಳೇ, ನೇತಾಜಿ ಎಂಬ ಪೂರ್ಣ ಚಂದ್ರನ ಮೇಲಿನ ಕತ್ತಲೆಯನ್ನು ಕಳೆದು ಬೆಳಕು ಹರಿಸಲು ನಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡೋಣ. ಸತ್ಯ ಉಳಿಯಲಿ ಸುಳ್ಳು ಅಳಿಯಲಿ. ಸತ್ಯ ಮೇವ ಜಯತೇ. ಜೈ ಹಿಂದ್.

#ಮತ್ತೊಮ್ಮೆ_ವಿಮೋಚನಂ
#ಅಲ್ಲಿಮೋದಿ_ಇಲ್ಲಿನಾವು
#TheEndOfTotalLunarEclipse
#NetajiTheFirstPrimeMinisterOfIndia
#ವಿವೇಕಶಿಕ್ಷಣವಾಹಿನಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ