ರಾವಣ ದಹನ ನೋಡುತ್ತಿದ್ದ ಜನರ ಮೇಲೆ ಹರಿದ ರೈಲು: 50ಕ್ಕೂ ಹೆಚ್ಚು ಜನರು ಸಾವು

ಅಮೃತಸರ: ವಿಜಯದಶಮಿ ಹಿನ್ನಲೆಯಲ್ಲಿ ರಾವಣ ದಹನ ನಡೆಯುತ್ತಿದ್ದ ವೇಳೆ ರೈಲ್ವೆ ಹಳಿಗಳ ಮೇಲೆ ನಿಂತಿದ್ದ ಜನರ ಮೇಲೆಯೇ ರೈಲು ಹರಿದ ಪರಿಣಾಮ 50ಕ್ಕೂ ಹೆಚ್ಚು ಜನರು ಬಲಿಯಾಗಿರುವ ಘಟನೆ ಪಂಜಾಬ್ ನ ಅಮೃತಸರದಲ್ಲಿ ನಡೆದಿದೆ.

ದಸರಾ ಪ್ರಯುಕ್ತ ಅಮೃತ್​ಸರ ಹಾಗೂ ಮನವಾಲಾ ಗೇಟ್​ ಸಂಖ್ಯೆ 27ರ ನಡುವೆ ರಾವಣ ದಹನ ನಡೆಯುತ್ತಿತ್ತು. ಇದನ್ನು ನೋಡಲೆಂದು ಸಾವಿರಾರು ಜನರು ಆಗಮಿಸಿದ್ದಾರೆ. ಅನೇಕರು ರೈಲಿನ ಹಳಿ ಮೇಲೆ ನಿಂತು ರಾವಣ ದಹನ ಕಾರ್ಯಕ್ರಮ ವೀಕ್ಷಿಉತ್ತಿದ್ದರು. ಈ ವೇಳೆ ಬಂದ ರೈಲು ಹಳಿಗಳ ಮೇಲೆ ನಿಂತಿದ್ದ ಜನರ ಮೇಲೆಯೇ ಹರಿದಿದೆ. ಈ ಭೀಕರ ದುರಂತದಲ್ಲಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದುರಂತದಲ್ಲಿ ಹಲವು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ರೈಲು ದುರಂತದ ವೇಳೆ ಘಟನಾ ಸ್ಥಳದಲ್ಲಿ 500 ರಿಂದ 700 ಮಂದಿ ಸೇರಿದ್ದರು. ರಾವಣ ಪ್ರತಿಕೃತಿ ದಹನದ ವೇಳೆ ಪಟಾಕಿಗಳನ್ನು ಸಿಡಿಸಲಾಗಿತ್ತು. ಇದರಿಂದ ಅಲ್ಲಿ ನೆರೆದಿದ್ದವರಿಗೆ ರೈಲು ಬಂದಿರುವುದು ಗೊತ್ತಾಗದೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

DMU 74943 ರೈಲು ಇದಾಗಿದ್ದು, ಮೂಲಗಳ ಪ್ರಕಾರ ರೈಲು ಜಲಂಧರ್​ನಿಂದ ಅಮೃತ್​ಸರಕ್ಕೆ ಆಗಮಿಸುತ್ತಿತ್ತು ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ