ಜಂಬೂಸವಾರಿ ಮೆರವಣಿಗೆಗೆ ಚಾಲನೆ: ಅಂಭಾರಿ ಮೇಲೆ ನಾಡ ಅಧಿದೇವತೆ ವಿರಾಜಮಾನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ ದೊರೆತಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದಾಳೆ. 750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆಯನ್ನು ಅರ್ಜುನ 7ನೇ ಬಾರಿ ಹೊತ್ತು ಸಾಗುತ್ತಿದ್ದಾನೆ. ಲಕ್ಷಾಂತರ ಜನರು ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಸಾಕ್ಷಿಯಾಗಿದ್ದಾರೆ.

ಅರಮನೆಯ ಕೋಟೆ ಆಂಜನೇಯಸ್ವಾಮಿ ಮುಂಭಾಗದಲ್ಲಿ ಜೋಡಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಹೆಚ್ ಡಿ ಕುಮಾರಸ್ವಾಮಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಚಾಮುಂಡೇಶ್ವರಿಗೆ ಶುಭಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಜಂಬೂಸವಾರಿಗೆ ಚಾಲನೆ ನೀಡಿದರು.

ಅರ್ಜುನ ಆನೆಯ ಎಡಬಲದಲ್ಲಿ ವರಲಕ್ಷ್ಮೀ, ಕಾವೇರಿ ಸಾಥ್ ನೀಡಿದ್ದು, ಕುಮ್ಕಿ ಆನೆಗಳಾಗಿ ವರಲಕ್ಷ್ಮೀ, ಕಾವೇರಿ ಆನೆಗಳೂ ಜಂಬೂಸವಾರಿಯಲ್ಲಿ ಭಾಗವಹಿಸಿವೆ. 13 ಬಾರಿ ಅಂಬಾರಿ ಹೊತ್ತಿರುವ ಬಲರಾಮನಿಗೆ ನಿಶಾನೆ ಗೌರವ ನೀಡಲಾಗಿದೆ. ಜಂಬೂಸವಾರಿ ಹಿಂದೆ ಸ್ತಬ್ಧ ಚಿತ್ರಗಳ ಮೆರವಣಿಗೆ ಸಾಗಲಿದ್ದು, ಈ ಬಾರಿ 42 ಸ್ತಬ್ಧ ಚಿತ್ರಗಳು ಪಾಲ್ಗೊಂಡಿವೆ.

ಇನ್ನು ಬಣ್ಣ ಬಣ್ಣದ ಚಿತ್ತಾರಗಳಲ್ಲಿ ಅರ್ಜುನ ಆನೆ ಮತ್ತು ಟೀಂ ಮಿಂಚುತ್ತಿದ್ದು, ಜಂಬೂ ಸವಾರಿಯಲ್ಲಿ ಒಟ್ಟು 12 ಆನೆಗಳು, ಅಶ್ವದಳಗಳು ಪಾಲ್ಗೊಂಡಿವೆ. ಅಂಬಾರಿ ಹೊತ್ತ ಅರ್ಜುನ ರಾಜಗಾಂಭೀರ್ಯದಿಂದ ಸಾಗುತ್ತಿದ್ದರೆ ಇನ್ನೊಂದೆಡೆ ವಿವಿಧ ಇಲಾಖೆಗಳ, ಜಿಲ್ಲೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದಿವೆ. ಈ ಬಾರಿ 42 ಸ್ತಬ್ಧ ಚಿತ್ರಗಳು ಪಾಲ್ಗೊಂಡಿವೆ.

ಜಂಬೂಸವಾರಿ ಮೆರವಣಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು 5 ಸಾವಿರದ 284 ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜನೆ ಮಾಡಲಾಗಿದೆ. ಜಂಬೂಸವಾರಿ ಮೆರವಣಿಗೆ ಬನ್ನಿ ಮಂಟಪದಲ್ಲಿ ಅಂತ್ಯವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ