ಚೀಟಿ ನಡೆಸುತ್ತಿದ್ದ ಮಹಿಳೆಯಿಂದ ಲಕ್ಷಾಂತರ ರೂ ಲಪಟಾಯಿಸಿ ಪರಾರಿ

ಮಹದೇವಪುರ, ಅ.18- ಜನರು ತಾವು ಸಂಪಾದಿಸಿದ ಹಣವನ್ನು ಮನೆ, ಮಕ್ಕಳ ಭವಿಷ್ಯ, ಮದುವೆ ಇನ್ನಿತರೆ ಸಂದರ್ಭದಲ್ಲಿ ನೆರವಾಗಲೆಂದು ಚೀಟಿ ರೂಪದಲ್ಲಿ ಕಟ್ಟಿದ್ದ ಲಕ್ಷಾಂತರ ರೂ. ಹಣವನ್ನು ಖತರ್ನಾಕ್ ಮಹಿಳೆ ಲಪಟಾಯಿಸಿ ಪರಾರಿಯಾಗಿರುವ ಘಟನೆ ಆವಲಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ತಮಿಳುನಾಡಿನ ಹೇಮಾವತಿ ಪರಾರಿಯಾಗಿರುವ ಖತರ್ನಾಕ್ ಮಹಿಳೆ.

ಬೆಂಗಳೂರಿನ ಕೆ.ಆರ್.ಪುರ ಸಮೀಪದ ಹಳೇಹಳ್ಳ ಗ್ರಾಮದ ಗಾಂಧೀಜಿ ಬಡಾವಣೆಯಲ್ಲಿ ನೆಲೆಸಿದ್ದ ಹೇಮಾವತಿ ಕಳೆದ ಹಲವು ವರ್ಷಗಳಿಂದ ಚೀಟಿ ನಡೆಸುತ್ತಿದ್ದರು.
ಪ್ರಾರಂಭಲ್ಲಿ 50ಸಾವಿರ, ಒಂದು ಲಕ್ಷ ರೂ. ಚೀಟಿ ನಡೆಸಿ ಹೇಮಾವತಿ ಜನರ ವಿಶ್ವಾಸಗಳಿಸಿದ್ದಳು. 2016ರಿಂದ 3 ಲಕ್ಷ, 6 ಹಾಗೂ 10 ಲಕ್ಷ ರೂ.ಗಳ ಚೀಟಿ ನಡೆಸುತ್ತಿದ್ದ ಈಕೆಯನ್ನು ನಂಬಿ ನೂರಾರು ಸ್ಥಳೀಯ ನಾಗರಿಕರು ಲಕ್ಷಾಂತರ ರೂ. ತೊಡಗಿಸಿದ್ದರು.
ಕಳೆದ ಐದಾರು ತಿಂಗಳಿನಿಂದ ಚೀಟಿದಾರರಿಗೆ ಹಣ ನೀಡದೆ ಸಬೂಬು ಹೇಳಿ ಮುಂದೂಡಿಕೊಂಡೇ ಬಂದಿದ್ದ ಈ ಮಹಿಳೆ, ಅ.9ರಂದು ಮನೆಗೆ ಬೀಗ ಹಾಕಿಕೊಂಡು ಚೀಟಿ ಹಾಕಿದ್ದವರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದಾಳೆ.

ಹಲವು ದಿನಗಳಿಂದ ಹೇಮಾವತಿ ಮನೆಗೆ ಬೀಗ ಹಾಕಿರುವುದು ಕಂಡು ಗಾಬರಿಯಾಗಿ ಇವರ ಬಳಿ ಚೀಟಿ ಹಾಕಿದ್ದವರೆಲ್ಲಾ ಆವಲಹಳ್ಳಿ ಠಾಣೆಗೆ ತೆರಳಿ ಈ ಮಹಿಳೆಯನ್ನು ಹುಡುಕಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿದ್ದು, ಈ ಸಂಬಂಧ ಸ್ಥಳೀಯ ನಿವಾಸಿ ಕಿತ್ತಗನೂರು ಮುನಿರಾಜು ದೂರು ನೀಡಿದ್ದಾರೆ.
ಈಕೆಯನ್ನು ನಂಬಿ ಹಲವರು ಬಡ್ಡಿಗಾಗಿ ಹಣ ನೀಡಿದ್ದರು. ಅವರಿಗೂ ಸಹ ಪಂಗನಾಮ ಹಾಕಿ ಹೇಮಾವತಿ ಪರಾರಿಯಾಗಿದ್ದಾಳೆ. ತಮ್ಮ ಕಷ್ಟಗಳಿಗೆ ಹಣ ಕೂಡಿಡುವ ಸಲುವಾಗಿ ನೂರಾರು ಜನರು ಈಕೆ ಬಳಿ ಚೀಟಿ ಹಾಕಿದ್ದರು. ಇಂತಹವರಿಗೆ ಮಂಕುಬೂದಿ ಎರಚಿ ಪರಾರಿಯಾಗಿರುವುದು ಚೀಟಿದಾರರ ಬದುಕಿನಲ್ಲಿ ಬರ ಸಿಡಿಲು ಬಡಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ