ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ

ಬೆಂಗಳೂರು,ಅ.15-ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಇನ್ನು ಮುಂದೆ ವಸ್ತ್ರ ಸಂಹಿತೆ(ಡ್ರೆಸ್ ಕೋಡ್) ಜಾರಿಯಾಗಲಿದೆ.

ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಪುರುಷರು ಪಂಚೆ ಮತ್ತು ಮಹಿಳೆಯರು ಸೀರೆ ಧರಿಸಬೇಕು. ಭಾರತೀಯ ಸಾಂಪ್ರದಾಯಿಕ ಧಿರಿಸುಗಳನ್ನು ಹಾಕಬೇಕು.ಇಲ್ಲದಿದ್ದರೆ ದೇವರ ದರ್ಶನ ಭಾಗ್ಯ ಸಿಗುವುದಿಲ್ಲ.

ಈ ವಸ್ತ್ರ ಸಂಹಿತೆ ನೀತಿಯನ್ನು ಕಡ್ಡಾಯವಾಗಿ ಸ್ವದೇಶಿ ಮತ್ತು ವಿದೇಶಿ ಭಕ್ತರು ಪಾಲನೆ ಮಾಡಲೇಬೇಕು. ಮನಸೋ ಇಚ್ಛೆ ಬಂದರೆ ದೇವಸ್ಥಾನಕ್ಕೆ ಪ್ರವೇಶವಿಲ್ಲ.
ಮಹಾಬಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮನವಿಯಂತೆ ಮುಜರಾಯಿ ಇಲಾಖೆ ಹೊರಡಿಸಿರುವ ಈ ವಸ್ತ್ರ ಸಂಹಿತೆ ಇನ್ನು ಮುಂದೆ ಕಡ್ಡಾಯಗೊಳ್ಳಲಿದೆ.

ಬರ್ಬಡ, ಜೀನ್ಸ್, ಸ್ಕಟ್ರ್ಸ್ ಸೇರಿದಂತೆ ತುಂಡುಗೆಯ ಧಿರಿಸುಗಳನ್ನು ಹಾಕಿಕೊಂಡು ಬಂದರೆ ಅಂಥವರನ್ನು ದೇವಸ್ಥಾನದೊಳಗೆ ಬಿಡುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ಈ ಹಿಂದೆ ಭಕ್ತರಿಗೆ ಯಾವುದೇ ರೀತಿಯ ಬಟ್ಟೆಗಳನ್ನು ಹಾಕಿಕೊಂಡರೂ ಬಂದರೂ ಪ್ರವೇಶವಿತ್ತು. ಆದರೆ ಕೆಲವರು ತಮ್ಮ ಮನಸೋ ಇಚ್ಚೆ ಬಟ್ಟೆಗಳನ್ನು ಧರಿಸಿಕೊಂಡು ಬರುತ್ತಿದ್ದರಿಂದ ಅದರಲ್ಲೂ ವಿದೇಶಿ ಪ್ರವಾಸಿಗರು ತುಂಡುಗೆಯನ್ನೇ ಧರಿಸಿಕೊಂಡು ಬರುತ್ತಿದ್ದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿತ್ತು.
ಈ ಬಗ್ಗೆ ಕೆಲವು ಸಂಪ್ರದಾಯಸ್ಥರು ಆಡಳಿತ ಮಂಡಳಿಯ ಗಮನ ಸೆಳೆದು ವಸ್ತ್ರ ಸಂಹಿತೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಇದನ್ನು ಸರ್ಕಾರದ ಗಮನಕ್ಕೆ ತಂದಿತ್ತು.

ದೇವಸ್ಥಾನದ ಕೋರಿಕೆಯಂತೆ ಮುಜರಾಯಿ ಇಲಾಖೆ ನೀತಿ ಸಂಹಿತೆ ಜಾರಿ ಮಾಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ