#MeToo ಆರೋಪಕ್ಕೆ ಕೇಂದ್ರ ಸಚಿವರ ಮೊದಲ ತಲೆದಂಡ; ಇ-ಮೇಲ್​ ಮೂಲಕ ರಾಜೀನಾಮೆ ಸಲ್ಲಿಸಿದ ಎಂ.ಜೆ.ಅಕ್ಬರ್

ನವದೆಹಲಿ : #MeToo ಅಭಿಯಾನಕ್ಕೆ ಕೇಂದ್ರ ಸರ್ಕಾರದ ಮೊದಲ ಸಚಿವರ ತಲೆದಂಡವಾಗಿದೆ. ಹತ್ತು ಮಂದಿ ಪತ್ರಕರ್ತೆಯರ ಲೈಂಗಿಕ ಕಿರುಕುಳ ಆರೋಪ ಎದುರಿಸಿದ್ದ ವಿದೇಶಾಂಗ ರಾಜ್ಯ ಖಾತೆ ಸಚಿವ ಎಂ.ಜೆ. ಅಕ್ಬರ್​ ಅವರಿಗೆ ರಾಜೀನಾಮೆ ನೀಡುವಂತೆ ಪಕ್ಷ ಸೂಚನೆ ನೀಡಿದೆ. ಅದರಂತೆ ಅಕ್ಬರ್​ ಅವರು ಇ-ಮೇಲ್​ ಮೂಲಕ ರಾಜೀನಾಮೆಯನ್ನು ಕಳುಹಿಸಿಕೊಟ್ಟಿದ್ದಾರೆ.
ಲೈಂಗಿಕ ಆರೋಪ ಕೇಳಿಬಂದ ನಂತರ ದಿನಗಳಿಂದಲೂ ವಿದೇಶದಲ್ಲಿದ್ದ ಎಂ.ಜೆ. ಅಕ್ಬರ್​ ಭಾನುವಾರ ಬೆಳಗ್ಗೆ ಭಾರತಕ್ಕೆ ಬಂದರು. ಆರೋಪ ಕೇಳಿಬಂದ ವಾರದವರೆಗೂ ಯಾವುದೇ ಕ್ರಮಕ್ಕೂ ಮುಂದಾಗಿರದ ಬಿಜೆಪಿ, ಈ ವಿಷಯದಲ್ಲಿ ಅಕ್ಬರ್​ ಅವರಿಂದ ವಿವರಣೆ ಪಡೆದು, ನಂತರ ಕ್ರಮ ಜರುಗಿಸಲು ನಿರ್ಧರಿಸಿತ್ತು. ಅದರಂತೆ ಅಕ್ಬರ್​ ದೇಶಕ್ಕೆ ಬಂದಾಕ್ಷಣವೇ ರಾಜೀನಾಮೆ ನೀಡುವಂತೆ ಪಕ್ಷ ಅಕ್ಬರ್​ ಅವರಿಗೆ ಸೂಚನೆ ನೀಡಿದೆ.
ಭಾರತೀಯ ಜನತಾ ಪಕ್ಷವೂ ಈ ವಿಷಯದಲ್ಲಿ ಹಲವು ದಿನಗಳಿಂದ ಮೌನ ವಹಿಸಿದೆ. ಪಕ್ಷದ ಮೂಲಗಳ ಪ್ರಕಾರ, ಅಕ್ಬರ್​ ವಿರುದ್ಧ ಪಕ್ಷವೂ ಗಂಭೀರ ಕ್ರಮ ತೆಗೆದುಕೊಳ್ಳಲಿದೆ. ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಯೂ ಇದೆ. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಕ್ಬರ್​ ಮಂತ್ರಿಯಾದ ನಂತರ ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಮತ್ತು ಈಗ ಕೇಳಿ ಬಂದಿರುವ ಆರೋಪ ಅವರು ಮಂತ್ರಿಯಾಗುವ ಮುಂಚೆಯೇ ನಡೆದಿರುವಂತಹದ್ದು ಎಂಬ ದೃಷ್ಟಿಕೋನದಲ್ಲೂ ಪಕ್ಷ ಯೋಚನೆ ಮಾಡಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಮೊದಲು ರಾಜೀನಾಮೆ ನೀಡಿ, ಆನಂತರ ಮುಂದಿನದನ್ನು ನೋಡೋಣ ಎಂದು ಹೇಳುವ ಮೂಲಕ ಸಚಿವರ ರಾಜೀನಾಮೆಗೆ ಪಕ್ಷ ಸೂಚಿಸಿತು.
ಆರೋಪದಲ್ಲಿ ಸತ್ಯಾಸತ್ಯತೆ ಈಗ ಮುಖ್ಯವಲ್ಲ. ಈ ಸಮಯದಲ್ಲಿ ರಾಜೀನಾಮೆ ಅಷ್ಟೇ ಮುಖ್ಯ ವಿಷಯವಾಗಿದೆ. ಯಾವುದೇ ವಿವರಣೆ, ಸ್ಪಷ್ಟನೆ ಬೇಡ, ಮೊದಲು ರಾಜೀನಾಮೆ ನೀಡಿ ಎಂದು ಪಕ್ಷವೂ ಎಂ.ಜೆ.ಅಕ್ಬರ್​ಗೆ ಹೇಳಿದೆ ಎಂದು ಸರ್ಕಾರ ಮೂಲಗಳು ತಿಳಿಸಿದೆ.

ಅಕ್ಬರ್​ ಅವರು ಸಂಪಾದಕರಾಗಿದ್ದ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ಹಲವು ಮಹಿಳೆಯರು #MeToo ಅಭಿಯಾನದಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಅಭಿಯಾನ ಬೆಂಬಲಿಸಿ ಕೇಂದ್ರದ ಸಚಿವೆ, ಆರೋಪ ಕೇಳಿಬಂದಿರುವ ಮಂತ್ರಿ ವಿರುದ್ಧ ಪಕ್ಷ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು.

ಆರೋಪ ಕೇಳಿಬಂದಿರುವ ಅಕ್ಬರ್  ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್​ ಆಗ್ರಹಿಸಿತ್ತು.
ಹಿರಿಯ ಪತ್ರಕರ್ತರಾದ ಎಂ.ಜೆ. ಅಕ್ಬರ್​ ಕಿರಿಯ ವಿದೇಶಾಂಗ ವ್ಯವಹಾರ ಖಾತೆ ಸಚಿವರಾಗಿದ್ದಾರೆ. ತಮ್ಮ ಅಧೀನ ಸಚಿವರ ಮೇಲೆ ಕೇಳಿಬಂದಿರುವ ಆರೋಪಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೂ ಕೂಡ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎಂ.ಜೆ. ಅಕ್ಬರ್​ ಪ್ರಮುಖ ಸುದ್ದಿಪತ್ರಿಕೆಗಳಾದ ಟೆಲಿಗ್ರಾಫ್, ಏಷ್ಯನ್ ಏಜ್ ಮತ್ತು ಸಂಡೆ ಗಾರ್ಡಿಯನ್​ ಸಂಪಾಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.
ಎಂ.ಜೆ. ಅಕ್ಬರ್ ವಿರುದ್ಧ ಹಲವು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಪತ್ರಕರ್ತೆ ಪ್ರಿಯಾ ರಮಣಿ ಎಂಬುವವರು ಮೊದಲಿಗೆ ಅಕ್ಬರ್​ ವಿರುದ್ಧ ಆರೋಪ ಮಾಡಿದರು. ಕಳೆದ ವರ್ಷ ಇವರು ಅಕ್ಬರ್​ ಅಸಭ್ಯ ವರ್ತನೆ ಬಗ್ಗೆ ಮ್ಯಾಗಝಿನ್​ ಒಂದಕ್ಕೆ ಅಕ್ಬರ್​ ಹೆಸರು ಉಲ್ಲೇಖಿಸದೆ ಲೇಖನ ಬರೆದಿದ್ದರು. ಕಳೆದ ವಾರ ಅಸಭ್ಯ ವರ್ತನೆ ತೋರಿದ ವ್ಯಕ್ತಿ ಯಾರು ಎಂಬುದನ್ನು ಹೇಳಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ