ಜೆಡಿಎಸ್ ಜತೆ ಮೈತ್ರಿ ಕುರಿತು ಕಾಂಗ್ರೆಸ್ ಮಹತ್ವದ ಮಾತುಕತೆ

ಬೆಂಗಳೂರು, ಅ.9- ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಕುರಿತು ಕಾಂಗ್ರೆಸ್ ನಾಯಕರು ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಮಹತ್ವದ ಮಾತುಕತೆ ನಡೆಸಿದರು.

ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಎಐಸಿಸಿ ಕಾರ್ಯದರ್ಶಿಗಳಾದ ವಿಷ್ಣುನಾದನ್, ಯಶೋಮತಿ ಠಾಕೋರ್, ಮಧು ಯಕ್ಷಿಗೌಡ್, ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಮತ್ತಿರರು ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಮಾತುಕತೆ ನಡೆಸಿದರು.

ಅಲ್ಲಿ ಮಂಡ್ಯ, ರಾಮನಗರ ಕ್ಷೇತ್ರಗಳನ್ನು ಈ ಮೊದಲು ಕೊಟ್ಟ ಮಾತಿನಂತೆ ಜೆಡಿಎಸ್‍ಗೆ ಬಿಟ್ಟುಕೊಡಬೇಕು ಎಂಬ ನಿರ್ಣಯಗಳಾಯಿತು. ಬಳ್ಳಾರಿ ಮತ್ತು ಜಮಖಂಡಿ ಕ್ಷೇತ್ರಗಳನ್ನು ಕಾಂಗ್ರೆಸ್ ಉಳಿಸಿಕೊಂಡು ಸ್ಪರ್ಧಿಸುವುದು ಎಂಬ ಅಭಿಪ್ರಾಯ ಕೇಳಿ ಬಂತು.

ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕುವುದು ಎಂಬ ನಿಲುವನ್ನು ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಲು ಜೆಡಿಎಸ್ ಕೂಡ ಬೇಡಿಕೆ ಮುಂದಿಟ್ಟಿದೆ. ಹೀಗಾಗಿ ದೇವೇಗೌಡರ ಜತೆ ಎಲ್ಲಾ ಕಾಂಗ್ರೆಸ್ ರಾಜ್ಯ ನಾಯಕರು ಕುಮಾರ ಕೃಪ ಅತಿಥಿ ಗೃಹದಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದರು.

ಎರಡು ಪಕ್ಷಗಳ ನಾಯಕರು ಚರ್ಚೆ ಮಾಡಿ ಸರ್ವಸಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಯಾವುದೇ ಭಿನ್ನಮತಗಳಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಿ, ಶತಾಯಗತಾಯ ಮಿತ್ರ ಕೂಟಗಳೇ ಗೆದ್ದುಕೊಳ್ಳಲು ರಣವ್ಯೂಹ ರಚಿಸಲಾಯಿತು.
ದೇವೇಗೌಡರ ಜತೆ ಚರ್ಚೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ಕುರಿತು ಚರ್ಚೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ