ಆರು ಬೋಗಿಗಳ ಮೆಟ್ರೋ ರೈಲಿಗೆ ಸಿ ಎಂ ಎಚ್‍ಡಿಕೆ ಚಾಲನೆ

ಬೆಂಗಳೂರು, ಅ.4- ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ ಪಾದಚಾರಿ ಮೇಲ್ಸೇತುವೆ ಎರಡನೆ ಆರು ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ನಾಡಪ್ರಭು ಕೆಂಪೇಗೌಡರ ಮೆಟ್ರೋ ರೈಲು ನಿಲ್ದಾಣದಿಂದ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆ ಉದ್ಘಾಟಿಸಿ ಅದರ ಮೇಲೆ ಮುಖ್ಯಮಂತ್ರಿ ಸಂಚಾರ ಮಾಡಿದರು.
ಪಾದಚಾರಿ ಮೇಲ್ಸೇತುವೆಯನ್ನು ಮೆಟ್ರೋ ನಿಲ್ದಾಣದಿಂದ ಕೆಎಸ್‍ಆರ್‍ಟಿಸಿ ಟರ್ಮಿನಲ್-1, ಬಿಎಂಟಿಸಿ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಆನಂದರಾವ್ ವೃತ್ತ, ಗಾಂಧಿನಗರ ಮತ್ತಿತರ ಕಡೆಗೆ ನೇರ ಸಂಪರ್ಕ ಕಲ್ಪಿಸಲಾಗಿದೆ.
ಪಾದಚಾರಿ ಮೇಲ್ಸೇತುವೆ ಉದ್ದ 100 ಮೀಟರ್‍ಗಳಿದ್ದು, 30 ಮೀಟರ್‍ಗಳನ್ನು ಕಬ್ಬಿಣದಿಂದ ನಿರ್ಮಿಸಲಾಗಿದ್ದರೆ 70 ಮೀಟರ್‍ಅನ್ನು ಕಾಂಕ್ರಿಟ್‍ನಿಂದ ನಿರ್ಮಿಸಲಾಗಿದೆ. ಈ ಸೇತುವೆ ಆರು ಮೀಟರ್ ಅಗಲವಿದ್ದು, ಒಟ್ಟು 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಮೆಟ್ರೋ ರೈಲು ನಿಗಮದಿಂದ ನಾಲ್ಕು ಪ್ರವೇಶ ದ್ವಾರಗಳನ್ನು ಈಗಾಗಲೇ ತೆರೆಯಲಾಗಿದ್ದು, ಇಂದು ಐದನೆ ಪ್ರವೇಶ ದ್ವಾರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್‍ಗಳನ್ನು ತೆರೆಯಲಾಗುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ಬೋಗಿಗಳಿದ್ದ ಮೆಟ್ರೋ ರೈಲನ್ನು ಆರು ಬೋಗಿಗಳಿಗೆ ಹೆಚ್ಚಿಸಲಾಯಿತು.
ಕಳೆದ ಜೂ.22ರಂದು ಮೊದಲ ಆರು ಬೋಗಿಗಳ ರೈಲು ವಾಣಿಜ್ಯ ಕಾರ್ಯಾರಂಭಗೊಳಿಸಲಾಗಿತ್ತು. ಇಂದು ಪೂರ್ವ, ಪಶ್ಚಿಮ ಮಾರ್ಗದಲ್ಲಿ ಸಂಚರಿಸುವ ಆರು ಬೋಗಿಗಳ ಮೆಟ್ರೋ ರೈಲನ್ನು ಆರಂಭಿಸಲಾಯಿತು. ನ.1ರ ನಂತರ ಪ್ರತಿ ತಿಂಗಳು ಎರಡು ಅಥವಾ ಮೂರು ಮೆಟ್ರೋ ರೈಲುಗಳನ್ನು (ಆರು ಬೋಗಿಗಳ) ಆರಂಭಿಸಲಾಗುತ್ತಿದೆ.
ನಗರದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮಾರ್ಗವಾಗಿ ಆರು ಮೆಟ್ರೋ ರೈಲುಗಳು ಸಂಚರಿಸುತ್ತಿದ್ದು, ಇದರಿಂದ ಶೇ.15ರಷ್ಟು ಇಂಧನ ಉಳಿತಾಯವಾಗುತ್ತಿದೆ. ಇನ್ನಷ್ಟು ತಾಂತ್ರಿಕ ಸೌಲಭ್ಯಗಳನ್ನು ಒದಗಿಸಿರುವುದರಿಂದ ಪ್ರಯಾಣಿಕರು ಹಾಗೂ ನಿಗಮಕ್ಕೆ ಹೆಚ್ಚಿನ ಅನುಕೂಲವಾಗಿದೆ. ರೈಲುಗಳ ಡೇಟಾವನ್ನು ದೂರದಿಂದಲೇ ಡೌನ್‍ಲೋಡ್ ಮಾಡಿಕೊಳ್ಳಬಹುದಾದಂತಹ ವ್ಯವಸ್ಥೆ ಕಲ್ಪಿಸಲಾಗಿದೆ.
ಆರು ಬೋಗಿಗಳ ಎರಡನೆ ಮೆಟ್ರೋ ರೈಲಿಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳು ನಂತರ ಆ ರೈಲಿನಲ್ಲೇ ನಾಗಸಂದ್ರದವರೆಗೂ ಪ್ರಯಾಣ ಮಾಡಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಂಸದ ಪಿ.ಸಿ.ಮೋಹನ್, ಮೇಯರ್ ಗಂಗಾಂಬಿಕೆ, ಉಪಮೇಯರ್ ರಮಿಳಾ, ಮಾಜಿ ಶಾಸಕ ಕೋನರೆಡ್ಡಿ ಸೇರಿದಂತೆ ಮೆಟ್ರೋ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ