ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ನೊಡನೆ ವಿಲೀನಕ್ಕೆ ವಿಜಯಾ ಬ್ಯಾಂಕ್ ಅಸ್ತು

ಬೆಂಗಳೂರು: ಕರ್ನಾಟಕದಲ್ಲಿ ಸ್ಥಾಪಿತವಾದ ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದಾಗಿರುವ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾದೊಡನೆ ವಿಲೀನವಾಗಲು ವಿಜಯಾ ಬ್ಯಾಂಕ್ ಆಡಳಿತ ಮಂಡಳಿ ಶನಿವಾರ ಅನುಮೋದನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಅತ್ತಾವರ ಬಾಲಕೃಷ್ಣ ಶೆಟ್ಟಿ ಎನ್ನುವವರಿಂದ ಅಕ್ಟೋಬರ್ 23, 1931ರಂದು ಸ್ಥಾಪಿತವಾಗಿದ್ದ ವಿಜಯಾ ಬ್ಯಾಂಕ್ 87 ವರ್ಷದ ಸುದೀರ್ಘ ಇತಿಹಾಸ ಹೊಂದಿದೆ.
ದೇನಾ ಬ್ಯಾಂಕ್ ತಾನು ಸರ್ಕಾರದ ಸೂಚನೆಯಂತೆ ಇತರೆ ಬ್ಯಾಂಕ್ ಗಳೊಡನೆ ವಿಲೀನವಾಗಲು ಒಪ್ಪಿಗೆ ಸೂಚಿಸಿದ ಎರಡು ದಿನಗಳ ಬಳಿಕ ವಿಜಯಾ ಬ್ಯಾಂಕ್ ತನ ನಿಲುವನ್ನು ಪ್ರಕಟಿಸಿದೆ.
ಸೆಬಿ ರೆಗ್ಯುಲೇಶನ್ಸ್ 30 ಎಲ್ ಒಡಿಆರ್ ರೆಗ್ಯುಲೇಶನ್ಸ್2015 ರ ಅನುಸಾರವಾಗಿ ನಾವು ತಮ್ಮ ಬ್ಯಾಂಕ್ ಅನ್ನು ಇತರೆ ಎರಡು ಬ್ಯಾಂಕ್ ಗಳಾದ ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಜತೆ ವಿಲೀನಗೊಳ್ಳಲು ಭಾರತ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯ, 17 ನೇ ಸೆಪ್ಟೆಂಬರ್ 2018 ರ ದಿನಾಂಕದಂದು ನೀಡಿದ್ದ ಪ್ರಸ್ತಾವನೆಯನ್ನು ಒಕ್ಕೊರಲಿನಿಂದ ಅನುಮೋದಿಸಿದ್ದೇವೆ ಎಂದು ಬ್ಯಾಂಕ್ ನ ಅಧಿಕೃತ ಪ್ರಕಟಣೆ ಹೇಳಿದೆ.
ಅಧಿಸೂಚನೆ ಹೇಳುವಂತೆ ಬ್ಯಾಂಕ್ ವಿಲೀನವು ಜಾಗತಿಕ ಮಟ್ಟದ ಬ್ಯಾಂಕೊಂದರ ರಚನೆಗೆ ಕಾರಣವಾಗಲಿದೆ.ಇದರಿಂದ ಭಾರತ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲಿದೆ.
“ವಿಲೀನವು ಲಾಭದ  ಪ್ರಮಾಣ, ಉತ್ಪಾದಕತೆ ಹೆಚ್ಚಳ, ಬ್ಯಾಂಕಿಂಗ್ ವ್ಯವಸ್ಥೆಯದಕ್ಷತೆಗೆ ದಾರಿ ಮಾಡುತ್ತದೆ.ಜೊತೆಗೆ, ಜಾಗತಿಕ ಮಟ್ಟದ ಬ್ಯಾಂಕುಗಳನ್ನು ರಚಿಸಲು  ಪ್ರಚೋದನೆಯನ್ನು ನೀಡುತ್ತದೆ ಸ್ಕೇಲ್, ಕ್ರೆಡಿಟ್ ಬೆಳವಣಿಗೆಯನ್ನು ಹೆಚ್ಚಿಸುವುದು, ದಕ್ಷತೆ ಮತ್ತು ಅಪಾಯಗಳ ನಿರ್ವಹಣೆಯಲ್ಲಿ ಸುಧಾರಣೆ ಹಾಗೂ ವ್ಯಾಪ್ತಿ ವಿಸ್ತರಣೆ ಮೂಲಕ ಹಣಕಾಸಿನ ಸೇರ್ಪಡೆಗಾಗಿ  ವಿಲೀನವೆನ್ನುವುದು ಉತ್ತಮ ಕ್ರಮ”ಬ್ಯಾಂಕ್ ವಿವರಿಸಿದೆ.
ಸರ್ಕಾರ ಈ ವಿಲೀನ ಪ್ರಸ್ತಾವನೆಯಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಬಳಿಕದ ಮೂರನೇ ಅತಿ ದೊಡ್ಡ ಬ್ಯಾಂಕ್ ಒಂದರ ರಚನೆಯಾಗಿ ದೇಶದ ಆರ್ಥಿಕತೆಗೆ ನೆರವಾಗಲಿದೆ ಎಂದು ಭಾವಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ