ಅವರವರ ಧರ್ಮಗಳನ್ನು ಅನುಸರಿಸಿ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ: ಬೇಲಿಮಠದ ಶಿವಾನುಭಾವ ಶಿವರುದ್ರ ಸ್ವಾಮೀಜಿ

ಬೆಂಗಳೂರು, ಸೆ.30-ಜಗತ್ತಿನ ಎಲ್ಲಾ ಧರ್ಮಗಳು ಶಾಂತಿ, ಸೌಹಾರ್ದತೆಯನ್ನು ಸಾರಿದೆÉ. ಎಲ್ಲರೂ ಅವರವರ ಧರ್ಮಗಳನ್ನು ಅನುಸರಿಸಿ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಬೇಲಿಮಠದ ಶಿವಾನುಭಾವ ಶಿವರುದ್ರ ಸ್ವಾಮೀಜಿ ಹೇಳಿದ್ದಾರೆ.

ಇಂದಿರಾನಗರದ ಮಸ್ಜಿದ್ ಎ ಉಮ್ಮುಲ್ ಹುಸ್ನೈನ್ ವತಿಯಿಂದ ಏರ್ಪಡಿಸಿದ್ದ ಮತೀಯ ಸೌಹಾರ್ದತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಗಳಿಂದ ಸಮಸ್ಯೆಗಳು ಸೃಷ್ಟಿಯಾಗುವುದಿಲ್ಲ. ಜಗತ್ತಿನ ಇಂದಿನ ಎಲ್ಲಾ ಸಮಸ್ಯೆಗಳು ಮಾನವ ನಿರ್ಮಿತವಾದದ್ದು. ಧರ್ಮಗಳ ಸಾರವನ್ನು ಅನುಸರಿಸಿ ನಡೆದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.

ಜಗತ್ತಿನಲ್ಲಿ ಇಂದು ಸತ್ಯ ಹಾಗೂ ಮಿಥ್ಯದ ನಡುವಿನ ಹೋರಾಟ ನಡೆಯುತ್ತಿದೆ. ನಾವು ಯಾರೊಂದಿಗೆ ಕೈಜೋಡಿಸಬೇಕು ಎಂಬುದನ್ನು ನಿರ್ಧರಿಸಬೇಕಾದ ಸಮಯ ಬಂದಿದೆ. ಇಸ್ಲಾಂ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳು ಶಾಂತಿಯನ್ನು ಪ್ರತಿಪಾದಿಸಿವೆ. ದ್ವೇಷ ಮತ್ತು ಹಿಂಸೆಗೆ ಧರ್ಮದಲ್ಲಿ ಅವಕಾಶವಿಲ್ಲ. ಆದರೆ ಧರ್ಮದ ಅನುಯಾಯಿಗಳು ಪರಸ್ಪರ ಹಿಂಸೆಯಲ್ಲಿ ತೊಡಗಿರುವುದು ವಿಷಾದನೀಯ ಎಂದು ಹೇಳಿದರು.

ಕ್ಷಣದಲ್ಲಿ ಆದ ತಪ್ಪಿಗೆ ಶತಮಾನಗಳ ಕಾಲ ಶಿಕ್ಷೆ ಅನುಭವಿಸುವುದು ಎಂಬ ಕವಿವಾಣಿಯಂತೆ ಯಾರೋ ಮಾಡಿದ ತಪ್ಪಿಗೆ ಇಂದು ನಾವು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಮಾರ್ಮಿಕವಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಫ್ರೇಜರ್ ಟೌನ್ ಮದ್ರಸಾ ಎ ಇಸ್ಲಾಹುಲ್ ಬನಾತ್ ಮುಖ್ಯಸ್ಥ ಮೌಲಾನ ಶಬ್ಬೀರ್ ಅಹ್ಮದ್ ನದ್ವಿ, ಫಾದರ್ ಫೌಸ್ಟಿನ್ ಲೋಬೋ, ಬಲ್ಜೀತ್ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ಮುಹಮ್ಮದ್ ಸನಾವುಲ್ಲಾ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ