2020ರ ವೇಳೆಗೆ ದೇಶದ ಎಲ್ಲರೂ ಉದ್ಯೋಗಸ್ಥರಾಗಿರುತ್ತಾರೆ: ರಾಮ್‍ಮಾಧವ್

ಬೆಂಗಳೂರು,ಸೆ.30- ಮುಂದಿನ 2020ರ ವೇಳೆಗೆ ದೇಶದ ಎಲ್ಲರೂ ಉದ್ಯೋಗಸ್ಥರಾಗಿರುತ್ತಾರೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‍ಮಾಧವ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯ ಕಾನ್ ಕ್ಲೇವ್‍ನಲ್ಲಿ ಮಾತನಾಡಿದ ಅವರು, 2020ರ ವೇಳೆಗೆ ದೇಶದ ಎಲ್ಲರೂ ಕೂಡ ಸ್ವಂತ ಮನೆಯನ್ನು ಹೊಂದಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಓಡಿಹೋಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭ್ರಷ್ಟಾಚಾರವನ್ನು ಬೇರು ಸಮ್ಮೇತ ಕಿತ್ತುಹಾಕಲು ಪ್ರಯತ್ನಿಸುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ವ್ಯಕ್ತಿತ್ವವುಳ್ಳವರು ಎಂದ ಅವರು, ಮೇಲೆ ಕುಳಿತವರು ಉತ್ತಮರಾಗಿದ್ದಾರೆ ಭ್ರಷ್ಟಾಚಾರದ ಹೋರಾಟ ಸಫಲವಾಗುತ್ತದೆ. ಶೇ.98ರಷ್ಟು ಕಪ್ಪು ಹಣ ಬ್ಯಾಂಕ್‍ಗಳಿಗೆ ಬಂದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ನಮ್ಮ ದೇಶದ ಬಗ್ಗೆ ಹಾಗೂ ಪ್ರಧಾನಿ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದಾರೆ ಎಂದು ಹೇಳಿದರು.

ಭಯೋತ್ಪಾದಕರು ದೇಶದೊಳಗೆ ಬರದಂತೆ ದಾಳಿ ಮಾಡಿದರಂತೆ ಎಂಬುದನ್ನು ನಾವು ಕೇಳಿದ್ದೆವು. ಆದರೆ ಈಗ ಕಾಲ ಬದಲಾಗಿದ್ದು, ನಮ್ಮ ಸೈನಿಕರು ಭಯೋತ್ಪಾದಕರಿರುವ ಜಾಗಗಳಿಗೆ ಹೋಗಿ ದಾಳಿ ಮಾಡಿದ್ದಾರೆ. ಇಂಥ ಸರ್ಜಿಕಲ್ ಸ್ಟ್ರೈಕ್‍ನ್ನು ಕಾಂಗ್ರೆಸ್ ಒಪ್ಪುವುದಿಲ್ಲ. ಆದರೂ ಯುವಕರು ಉತ್ಸಾಹಿಗಳಾಗಿದ್ದಾರೆ. ಆತ್ಮವಿಶ್ವಾಸದ ದೇಶ ನಿರ್ಮಾಣವಾಗುತ್ತಿದೆ ಎಂದರು.
ವಿಶ್ವ ಭಾರತವನ್ನು ಗೌರವಿಸುತ್ತಿದೆ .ಕೇವಲ ಒಂದು ತಿಂಗಳೊಳಗೆ 175 ದೇಶಗಳು ಯೋಗಾಚರಣೆ ಮಾಡಿವೆ ಎಂದು ರಾಮ್‍ಮಾಧವ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ