ಹೊಸ ಮುಖವಾಡದಲ್ಲಿ ಹಳೆಯ ಪಾಕಿಸ್ತಾನ: ವಿಶ್ವಸಂಸ್ಥೆ ಭಾರತದ ರಾಯಭಾರಿ ಈನಂ ಗಂಭೀರ್ ಲೇವಡಿ

ವಿಶ್ವಸಂಸ್ಥೆ: ಪಾಕಿಸ್ತಾನದ ಚುನಾವಣೆ ಬಳಿಕ ನಾವು ನವ ಪಾಕಿಸ್ತಾನ ಎಂಬ ಪದ ಕೇಳುತ್ತಿದ್ದೇವೆ. ಆದರೆ ಇದು ನವ ಪಾಕಿಸ್ತಾನ ಅಲ್ಲ. ಬದಲಿಗೆ ಹೊಸ ಮುಖವಾಡದ ಹಳೆಯ ಪಾಕಿಸ್ತಾನ ಎಂದು ವಿಶ್ವಸಂಸ್ಥೆಯ ಭಾರತದ ರಾಯಭಾರಿ ಈನಂ ಗಂಭೀರ್ ಲೇವಡಿ ಮಾಡಿದ್ದಾರೆ.

ನಿನ್ನೆಯಷ್ಟೇ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಅದರ ಮುಂದುವರೆದ ಭಾಗ ಎಂಬಂತೆ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ಈನಂ ಗಂಭೀರ್ ಕೂಡ ಪಾಕಿಸ್ತಾನದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.  ಕಳೆದ ಆಗಸ್ಟ್ ತಿಂಗಳ  ಬಳಿಕ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ನಾವು ನವ ಪಾಕಿಸ್ತಾನ ಎಂಬ ಪದ ಕೇಳುತ್ತಿದ್ದೇವೆ. ಆದರೆ ಈಗ ನಮಗೆ ಮನವರಿಕೆಯಾಗಿದ್ದು, ಬದಲಾಗಿರುವುದು ಕೇವಲ ಹೆಸರಷ್ಟೇ. ಆದರೆ ಛಾಳಿಯಲ್ಲ. ಇದು ಹೊಸ ಮುಖವಾಡದ ಹಳೆಯ ಪಾಕಿಸ್ತಾನ ಎಂದು  ಹೇಳಿದ್ದಾರೆ.

ಪೇಶಾವರ ಮಿಲಿಟರಿ ಶಾಲೆ ಮೇಲೆ ಉಗ್ರರು ದಾಳಿ ನಡೆಸಿ ಅಮಾಯಕ ಮಕ್ಕಳ ಹತ್ಯೆಗೈದಿದ್ದಾಗ ಇಡೀ ಭಾರತವೇ ಮರುಕ ಪಟ್ಟಿತ್ತು. ಭಾರತೀಯ ಸಂಸತ್ತು ಶೋಕಾಚರಣೆ ನಡೆಸಿತ್ತು. ಭಾರತದಲ್ಲಿರುವ ಪ್ರತೀಯೊಂದು ಶಾಲೆಯಲ್ಲೂ ಪೇಶಾವರ ಶಾಲೆಯಲ್ಲಿ ಹತ್ಯೆಗೀಡಾದ ಮಕ್ಕಳಿಗಾಗಿ ಸಂತಾಪ ಸೂಚಿಸಿತ್ತು. ಆದರೆ ಪಾಕಿಸ್ತಾನದ ವಿದೇಶಾಂಗ ಸಚಿವರು ಇದನ್ನು ಲೇವಡಿ ಮಾಡಿದ್ದಾರೆ. ಉಗ್ರನೋರ್ವನನ್ನು ಸತ್ತಾಗ ಆತನ ಸಾವನ್ನು ವೈಭವೀಕರಿಸಿದ್ದಾರೆ. ಆ ಮೂಲಕ ಪಾಕಿಸ್ತಾನ ಸರ್ಕಾರ ಉಗ್ರಗಾಮಿಗಳ ಬೆನ್ನಿಗೆ ನಿಂತಿದೆ.

ವಿಶ್ವಸಂಸ್ಥೆಯ ಘೋಷಿತ ಉಗ್ರರ ಪಟ್ಟಿಯಲ್ಲಿರುವ ಉಗ್ರ ಹಫೀಜ್ ಸಯ್ಯೀದ್ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ. ಇದನ್ನು ಪಾಕಿಸ್ತಾನ ನಿರಾಕರಿಸುವುದೇ.. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದಾಗಿ ಭಾರತೀಯ ಸೈನಿಕರು ಸಾವನ್ನಪ್ಪುತ್ತಿದ್ದಾರೆ. ಆದರೆ ಇದೇ ಪಾಕಿಸ್ತಾನ ಇಂದು ಶಾಂತಿ ಮಾತುಕತೆಯ ಮಾತನ್ನಾಡುತ್ತಿದೆ. ಆದರೆ ನೆನಪಿರಲಿ ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆ ಎರಡೂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ