ಉತ್ತರ ಒಳನಾಡು, ಕರಾವಳಿ, ಮಲೆನಾಡು ಭಾಗದಲ್ಲಿ ಇನ್ನೆರಡು ದಿನ ಹೆಚ್ಚಿನ ಮಳೆ ಸಾಧ್ಯತೆ

ಬೆಂಗಳೂರು, ಸೆ.21 ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ರಾಜ್ಯದ ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನೆರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಇನ್ನೊಂದು ವಾರದ ಕಾಲ ರಾಜ್ಯದಲ್ಲಿ ಮಳೆ ಇದೇ ರೀತಿ ಮುಂದುವರೆಯಲಿದೆ. ದಕ್ಷಿಣ ಒಳನಾಡಿನಲ್ಲೂ ಚದುರಿದಂತೆ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ನಿನ್ನೆ ದಾವಣಗೆರೆ, ಹಾವೇರಿ ಸೇರಿದಂತೆ ಹಲವು ಕಡೆ ಉತ್ತಮ ಮಳೆಯಾಗಿದೆ. ಹೆಚ್ಚೂ ಕಡಿಮೆ ಇದೇ ರೀತಿ ಇನ್ನೊಂದು ವಾರದ ಕಾಲ ಮಳೆ ಮುಂದುವರೆಯಲಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ತೀವ್ರತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮದಿಂದ ರಾಜ್ಯದ ಉತ್ತರ ಕರ್ನಾಟಕ ಹಾಗೂ ಪೂರ್ವ ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ