ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆಗೆ ಆಗ್ರಹಿಸಿ ಪ್ರತಿಭಟನೆ

 

ಬೆಂಗಳೂರು, ಸೆ.20- ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡದ ಸರ್ಕಾರದ ಕ್ರಮ ವಿರೋಧಿಸಿ ಸೆ.27ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ದಲಿತ ಸಂಘರ್ಷ ಸಮಿತಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ್ ನಾಗವಾರ ಮಾತನಾಡಿ, ಸಮ್ಮಿಶ್ರ ಸರ್ಕಾರ ಬಂದ ನಂತರ ಸರ್ಕಾರ ನಗರ ಹಾಗೂ ಪಟ್ಟಣ ಪ್ರದೇಶಗಳ ದಲಿತ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಇಂತಿಷ್ಟು ಎಂದು ನಿಗದಿಗೊಳಿಸಿರುವುದು ಸರಿಯಲ್ಲ. ಇದರಿಂದ ಹಳ್ಳಿಗಾಡು ಪ್ರದೇಶದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.ಹಾಗಾಗಿ ಸರ್ಕಾರ ಅರ್ಜಿ ಸಲ್ಲಿಸುವ ಎಲ್ಲ ಮಕ್ಕಳಿಗೂ ಹಾಸ್ಟೆಲ್ ಪ್ರವೇಶಾತಿಗೆ ಅವಕಾಶ ಮಾಡಿಕೊಡಬೇಕೆಂದು ಹೇಳಿದರು.

ಈಗಿರುವ ಕಟ್ಟಡಗಳ ಜೊತೆಗೆ ಸರ್ಕಾರ ಹೆಚ್ಚುವರಿ ಕಟ್ಟಡ ನಿರ್ಮಿಸಿ ಅಥವಾ ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ದಲಿತ ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಪ್ರಸ್ತುತ ಹೊರಡಿಸಲಾಗಿರುವ ಸುತ್ತೋಲೆ ದಲಿತ ವಿದ್ಯಾರ್ಥಿಗಳಿಗೆ ಮಾರಕವಾಗಿದ್ದು, ಇದನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು, ಎಲ್ಲ ಯೋಜನೆಗಳನ್ನು ಜಾರಿಗೊಳಿಸುವ ಏಕ ಗವಾಕ್ಷಿ ಯೋಜನೆ ಜಾರಿ ಮಾಡಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಬೆಂಗಳೂರು ವಿಭಾಗೀಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ನಗರ ಜಿಲ್ಲಾ ಸಂಚಾಲಕ ಶ್ರೀನಿವಾಸ್, ಖಜಾಂಚಿ ಬಿ.ರಾಮಚಂದ್ರ ನಾಗಸಂದ್ರ ಇತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ