ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮೇಲ್ದರ್ಜೆಗೆ

ಬೆಂಗಳೂರು,ಸೆ.20-ಖಾಸಗಿ ಕಾಪೆರ್Çೀರೇಟರ್ ಆಸ್ಪತ್ರೆಗಳ ಮಾದರಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಸಿ.ರಾಮಚಂದ್ರ ತಿಳಿಸಿದರು.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿಂದು ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ ಪೆಟ್ ಸಿಟಿ ಸ್ಕ್ಯಾನ್ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ ಅಪಾರಿಸೀಸ್ ಯಂತ್ರಗಳ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಯಾನ್ಸರ್ ಆಸ್ಪತ್ರೆಗಳಿಗೆ ಕಾಪೆರ್Çೀರೇಟರ್ ಆಸ್ಪತ್ರೆಗಳ ಲುಕ್ ನೀಡಲಾಗುವುದು. ರೋಗಿಗಳಿಗೆ ಸೂಪರ್ ಡೀಲಕ್ಸ್ ಕೊಠಡಿಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು.
ರೋಗಿಗಳ ಅನುಕೂಲಕ್ಕಾಗಿ ಇ ಬ್ಲಾಕ್ ನಿರ್ಮಾಣ ಮಾಡಿ ಕಾಗದ ರಹಿತ ಆಡಳಿತ ವ್ಯವಸ್ಥೆ ಜಾರಿಗೆ ತರಲು ಕ್ರಮ ಕೈಗೊಳ್ಳುತ್ತಿದ್ದು, ಇದಕ್ಕೆ ಇನ್ಫೋಸಿಸ್ ಸಂಸ್ಥೆ ನೆರವು ನೀಡುತ್ತಿದೆ ಎಂದು ತಿಳಿಸಿದರು.

ಕ್ರೆಡಿಟ್ ಕಾರ್ಡ್ ಬಳಕೆ ಸೌಲಭ್ಯವಲ್ಲದೆ ಸುವರ್ಣ ಕರ್ನಾಟಕ, ಆರೋಗ್ಯ ಕರ್ನಾಟಕ ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ವಿಮಾ ಸೌಲಭ್ಯಗಳನ್ನು ಒಂದೇ ಕಡೆ ಒದಗಿಸಲು ತೀರ್ಮಾನಿಸಲಾಗಿದೆ. ಇದರಿಂದ ರೋಗಿಗಳಿಗೂ ಅನುಕೂಲವಾಗಲಿದೆ ಎಂದರು.
ವಾರ್ಷಿಕ 19 ಸಾವಿರ ಹೊಸ ರೋಗಿಗಳು ಕ್ಯಾನ್ಸರ್ ಆಸ್ಪತ್ರೆಗೆ ಬರುತ್ತಿದ್ದಾರೆ. ಅಲ್ಲದೆ ಮೂವರೆ ಲಕ್ಷ ರೋಗಿಗಳು ವಾರ್ಷಿಕವಾಗಿ ಪೂರಕ ಚಿಕಿತ್ಸೆಗಾಗಿ ಬರುತ್ತಾರೆ. 625 ಹಾಸಿಗೆ ಸಾಮಥ್ರ್ಯದ ಈ ಆಸ್ಪತ್ರೆ ಪ್ರಾದೇಶಿಕ ಕ್ಯಾನ್ಸರ್ ಆಸ್ಪತ್ರೆಯೂ ಆಗಿದೆ. ಇಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ಹಾಗೂ ಬೇರೆಯವರಿಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದು ಹೇಳಿದರು.
ಬಡವರಿಗೆ ಉಚಿತವಾಗಿ ಬೋನ್‍ಮ್ಯಾರೋ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಈ ವಿಭಾಗ ತೆರೆಯುವುದರಿಂದ ರೋಗಿಗಳು ಕಾಯುವ ಸಮಯ ಕಡಿಮೆಯಾಗಲಿದೆ ಎಂದರು.

ನ್ಯೂಕ್ಲಿಯರ್ ಮೆಡಿಸಿನ್ ವಿಭಾಗದ ಡಾ.ಹರೀಶ್ ಮಾತನಾಡಿ, ಪೆಟ್ ಸಿಟಿ ಸ್ಕ್ಯಾನಿಂಗ್ ಯಂತ್ರದಿಂದ ಕ್ಯಾನ್ಸರ್ ರೋಗವನ್ನು ಹಾಗೂ ರೋಗದ ವಿವಿಧ ಹಂತಗಳನ್ನು ಪತ್ತೆ ಹಚ್ಚಬಹುದು. ಅಲ್ಲದೆ ಚಿಕಿತ್ಸೆ ನಂತರ ರೋಗ ಯಾವ ಪ್ರಮಾಣದಲ್ಲಿ ಗುಣವಾಗಿದೆ ಎಂಬುದನ್ನು ತಿಳಿಯಲು ಈ ಯಂತ್ರ ಸಹಕಾರಿಯಾಗಿದೆ ಎಂದು ತಿಳಿಸಿದರು.

10 ಕೋಟಿ ರೂ. ವೆಚ್ಚದಲ್ಲಿ ಈ ಯಂತ್ರವನ್ನು ಸ್ಥಾಪಿಸಲಾಗುತ್ತಿದೆ. ರಜಾ ದಿನ ಹೊರತುಪಡಿಸಿ ಪ್ರತಿದಿನ 20 ಜನರಿಗೆ ಮಾತ್ರ ಪೆಟ್ ಸಿಟಿ ಸ್ಕ್ಯಾನಿಂಗ್ ಮಾಡಬಹುದಾಗಿದೆ. ಬಡವರಿಗೆ ಉಚಿತವಾಗಿದ್ದು, ಇತರರಿಗೆ 8ರಿಂದ 10 ಸಾವಿರ ರೂ. ವೆಚ್ಚವಾಗಲಿದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ದುಬಾರಿಯಾಗಿದೆ ಎಂದು ವಿವರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳ, ವೈದ್ಯಕೀಯ ಅಧೀಕ್ಷಕರಾದ ರೇಖಾ ಕುಮಾರ್, ಆರ್‍ಎಂಒ ಡಾ.ಪ್ರಭಾ, ಕಂಟೋನ್ಮೆಂಟ್ ರೋಟರಿ ಜಿಲ್ಲಾಧ್ಯಕ್ಷ ಕುಪ್ಪು ಸ್ವಾಮಿ, ರೋಟರಿ ಗೌರ್ನರ್ ಹರಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ