ಕಾದು ನೋಡುವ ತಂತ್ರಕ್ಕೆ ಶರಣಾದ ಭಿನ್ನಮತೀಯರು

ಬೆಂಗಳೂರು, ಸೆ.18- ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಅತೃಪ್ತ ಶಾಸಕರು ರಾಜೀನಾಮೆ ನೀಡಿ ಪಕ್ಷಕ್ಕೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಆತಂಕಗೊಂಡಿದೆ.
ಯಾವುದೇ ಕಾರಣಕ್ಕೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಜತೆ ಮಾತುಕತೆ ನಡೆಸುವವರೆಗೂ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದರಿಂದ ಭಿನ್ನಮತೀಯರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‍ನ ಈ ದಿಢೀರ್ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ. ಏಕೆಂದರೆ ಸಚಿವ ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ 16ರಿಂದ 18 ಶಾಸಕರು ಇಂದು ರಾಜೀನಾಮೆ ನೀಡಬಹುದೆಂಬ ನಿರೀಕ್ಷೆ ಬಿಜೆಪಿಯವರದ್ದಾಗಿತ್ತು.

ಎಲ್ಲವೂ ನಿರೀಕ್ಷೆಯಂತೆ ನಡೆದಿದ್ದರೆ ಇಂದು ರಮೇಶ್‍ಜಾರಕಿಹೊಳಿ ನೇತೃತ್ವದಲ್ಲಿ ಭಿನ್ನಮತೀಯ ಶಾಸಕರು ಮೊದಲು ರಾಜ್ಯಪಾಲ ವಿ.ಆರ್.ವಾಲಾ ಹಾಗೂ ನಂತರ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಇತ್ತ ಬಿಜೆಪಿ ಶಾಸಕರು ರಾಜೀನಾಮೆ ನೀಡುತ್ತಿದ್ದಂತೆ ನಾಳೆ ಶಾಸಕಾಂಗ ಸಭೆ ಬಳಿಕ ಎಲ್ಲಾ ಶಾಸಕರನ್ನು ರೆಸಾರ್ಟ್‍ಗೆ ಕೊಂಡೊಯ್ಯಲು ಬಿಜೆಪಿ ಸಿದ್ಧತೆ ನಡೆಸಿತ್ತು. ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಿದ್ದಂತೆ ಅವಿಶ್ವಾಸ ನಿರ್ಣಯ ಮಂಡಿಸಿ ಸರ್ಕಾರ ರಚಿಸುವ ಆಲೋಚನೆ ಬಿಜೆಪಿಯದ್ದಾಗಿತ್ತು.
ಆದರೆ, ರಾಜ್ಯ ರಾಜಕಾರಣ ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿರುವುದರಿಂದ ಬಿಜೆಪಿಯಲ್ಲಿ ಆತಂಕದ ಮನೆ ಮಾಡಿದೆ. ಭಿನ್ನಮತೀಯ ಶಾಸಕರು ಸಿದ್ದರಾಮಯ್ಯ ಅವರ ಮಾತಿಗೆ ಕಟ್ಟುಬಿದ್ದು, ರಾಜೀನಾಮೆಯಿಂದ ಹಿಂದೆ ಸರಿದರೆ ಗತಿಯೇನು ಎಂಬ ಮೂಲ ಪ್ರಶ್ನೆ ಎದುರಾಗಿದೆ.
ಈಗಾಗಲೇ ನಡೆದಿರುವ ಮಾತುಕತೆಯಂತೆ ಸುಮಾರು 16ರಿಂದ 18 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಒಂದೆರಡು ದಿನಗಳಲ್ಲಿ ಕೊಡಬೇಕಿತ್ತು. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಭಿನ್ನಮತಿಯರೆಲ್ಲರೂ ನಿರಂತರ ಸಂಪರ್ಕದಲ್ಲಿರುವುದು ಬಿಜೆಪಿಗೆ ಕಸಿವಿಸಿ ತಂದಿದೆ.

ಬೇಡಿಕೆ ಈಡೇರಿಸಲು ಸಿದ್ಧ :
ಶಾಸಕರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಮುಂದಾಗಿರುವುದರಿಂದ ರಾಜೀನಾಮೆ ನೀಡುವ ಬಗ್ಗೆ ಶಾಸಕರು ಮೀನಾಮೇಷ ಎಣಿಸುತ್ತಿದ್ದಾರೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ನಾವು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಎಲ್ಲಾ ಶಾಸಕರಲ್ಲಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನಡೆದರೆ ಉಪಚುನಾವಣೆಯಲ್ಲಿ ಗೆದ್ದು ಬರುವುದು ಅಷ್ಟು ಸುಲಭವಲ್ಲ. ಹಿಂದೆ ಆಪರೇಷನ್ ಕಮಲಕ್ಕೆ ಬಲಿಯಾದವರ ಪರಿಸ್ಥಿತಿಯನ್ನು ನೋಡಿಕೊಳ್ಳಿ ಎಂದು ಹಿತೋಪದೇಶ ಮಾಡಿದ್ದಾರೆ.
ಇದರಿಂದ ಭಿನ್ನಮತೀಯ ಶಾಸಕರು ಅಡಕತ್ತರಿಗೆ ಸಿಲುಕಿದ್ದು, ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬೆಳವಣಿಗೆ ಬಿಜೆಪಿಯನ್ನು ನಿದ್ದೆಗೆಡುವಂತೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ