ಆನ್‍ಲೈನ್ ಟಾಕ್ಸಿ ಚಾಲಕರಿಗೆ ಸರ್ಕಾರದಿಂದ ಸಾಲ ನೀಡಲು ಆಗ್ರಹ

ಬೆಂಗಳೂರು, ಸೆ.17- ಓಲಾ, ಊಬರ್ ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಜಾತಿವಾರು ನಿಗಮಮಂಡಳಿಗಳಿಂದ ನೇರ ಸಾಲಸೌಲಭ್ಯ ಕಲ್ಪಿಸಬೇಕು, ಮೀಟರ್ ಬಡ್ಡಿ ದಂಧೆಕೋರರಿಂದ ದೌರ್ಜನ್ಯ ತಪ್ಪಿಸಬೇಕು ಎಂದು ವಿವಿಧ ಚಾಲಕರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.

ರಾಷ್ಟ್ರೀಯ ಚಾಲಕರ ಸಂಘಟನೆ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ, ಆದರ್ಶ ಆಟೋ, ಟ್ಯಾಕ್ಸಿ ಚಾಲಕರ ಸಂಘ ಅಧ್ಯಕ್ಷ ಎಂ.ಮಂಜುನಾಥ್, ಸರ್ಕಾರ ಸ್ವಾಮ್ಯದ ಸಂಘ ಸಂಸ್ಥೆಗಳ ಅಧ್ಯಕ್ಷ ತನ್ವೀರ್ ಪಾಷ ಸೇರಿದಂತೆ ಹಲವು ಮುಖಂಡರು ಇಂದು ಪತ್ರಿಕಾಗೋಷ್ಠಿ ನಡೆಸಿ, ಬೆಂಗಳೂರು ನಗರದಾದ್ಯಂತ ಸುಮಾರು 60 ಸಾವಿರ ಚಾಲಕರು ಕಾರ್ಯನಿರ್ವಹಿಸುತ್ತಿದ್ದು, ಅನಿವಾರ್ಯ ಸಂದರ್ಭಗಳಲ್ಲಿ ಮೀಟರ್ ಬಡ್ಡಿಗೆ ಸಾಲ ಪಡೆಯುವ ಇವರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಸರ್ಕಾರ ಇವರ ರಕ್ಷಣೆಗೆ ಮುಂದಾಗಬೇಕು.ಜಾತಿವಾರು ನಿಗಮ ಮಂಡಳಿಗಳ ಮೂಲಕ ಸಾಲಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

ವಸತಿ ರಹಿತ ಚಾಲಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು, ದೌರ್ಜನ್ಯ ನಡೆಸುವ ಖಾಸಗಿ ಫೈನಾನ್ಸ್ ಕಂಪೆನಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದು, ಚಾಲಕರ ಮೇಲೆ ಸಂಚಾರಿ ಪೆÇಲೀಸರು ನಡೆಸುವ ಕಿರುಕುಳವನ್ನು ನಿಯಂತ್ರಿಸಬೇಕು, ಟ್ರಾವೆಲ್ ಮಾಲೀಕರಿಂದ ಚಾಲಕರಿಗೆ ಬರಬೇಕಾದ ಬಾಕಿ ವೇತನ ದೊರಕಿಸಿಕೊಡಬೇಕು, ಖಾಸಗಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರಿಗೆ ಇಎಸ್‍ಐ, ಪಿಎಫ್ ಸೌಲಭ್ಯ ಒದಗಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು 15 ದಿನಗಳೊಳಗಾಗಿ ಈಡೇರಿಸಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ