ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದ ಕೇಂದ್ರದ ತಂಡ ನವದೆಹಲಿಗೆ

ಬೆಂಗಳೂರು, ಸೆ.14- ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದ ಕೇಂದ್ರದ ತಂಡ ಇಂದು ನವದೆಹಲಿಗೆ ತೆರಳಿದೆ.
ರಾಜ್ಯ ಸರ್ಕಾರ ಅತಿವೃಷ್ಟಿಪೀಡಿತ ಪ್ರದೇಶಗಳಿಗೆ ತುರ್ತಾಗಿ 2ಸಾವಿರ ರೂ. ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ತಂಡವನ್ನು ಕಳುಹಿಸಲಾಗಿತ್ತು.

ಸೆ.11ರ ಸಂಜೆ ಆಗಮಿಸಿದ ಕೇಂದ್ರದ ತಂಡ ಸೆ.12 ಮತ್ತು 13ರಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಭಾರೀ ಮಳೆಯಿಂದ ಉಂಟಾಗಿರುವ ಮನೆ, ರಸ್ತೆ, ಸೇತುವೆ, ಬೆಳೆ ಸೇರಿದಂತೆ ಇನ್ನಿತರೆ ಅನಾಹುತಗಳ ಪರಿಶೀಲನೆ ನಡೆಸಿತು.
ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿತ್ತು. ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಅನಿಲ್‍ಮಲ್ಲಿಕ್ ನೇತೃತ್ವದಲ್ಲಿ ಒಂದು ತಂಡ ಹಾಗೂ ಕೇಂದ್ರ ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ ಭಾರ್ತೆಂದು ಕುಮಾರ್‍ಸಿಂಗ್ ನೇತೃತ್ವದಲ್ಲಿ ಇನ್ನೊಂದು ತಂಡವಾಗಿ ನೆರೆ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿತ್ತು.

ಒಟ್ಟು ಆರು ಸದಸ್ಯರನ್ನೊಳಗೊಂಡ ಕೇಂದ್ರದ ಅಧ್ಯಯನ ತಂಡವು ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ನೆರೆ ಪೀಡಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಸಮಾಲೋಚನೆ ನಡೆಸಿತು. ನಂತರ ದೆಹಲಿಗೆ ತೆರಳಿತು.
ಈ ಅಧ್ಯಯನ ತಂಡ ನೀಡುವ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ನೆರೆ ಪೀಡಿತ ಪ್ರದೇಶಗಳಿಗೆ ನೆರವು ನೀಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ