ಅನಿವಾಸಿ ಭಾರತೀಯರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ವಿದೇಶಗಳಲ್ಲಿ ನಡೆಸಿರುವ ಸಭೆಗಳು ಯಶಸ್ವಿ

ಬೆಂಗಳೂರು, ಸೆ.11-ಅನಿವಾಸಿ ಭಾರತೀಯರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಮನವೊಲಿಸಲು ವಿದೇಶಗಳಲ್ಲಿ ನಡೆಸಿರುವ ಸಭೆಗಳು ಯಶಸ್ವಿಯಾಗಿವೆ ಎಂದು ಎಫ್‍ಕೆಸಿಸಿಐನ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇತ್ತೀಚೆಗೆ ತಾವು ರುವಾಂಡ, ಉಗಾಂಡ, ಯುಗಾಂಡ, ನ್ಯೂಯಾರ್ಕ್, ಅಮೆರಿಕಾದ ಡಲ್ಲಾಸ್, ಅಬುದಾಬಿ, ಶಾರ್ಜಾ, ದುಬೈ ಸೇರಿದಂತೆ ಹಲವಾರು ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಅನಿವಾಸಿ ಭಾರತೀಯರನ್ನು ಸಂಪರ್ಕಿಸಿದ್ದು, ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಮನವಿ ಮಾಡಲಾಗಿದೆ. ಎಫ್‍ಕೆಸಿಸಿಐನ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆಟೋ ಮೊಬೈಲ್, ಜವಳಿ, ಆರೋಗ್ಯ, ಹೊಟೇಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ಎರಡನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಬಹಳಷ್ಟು ಮಂದಿ ಮುಂದೆ ಬಂದಿದ್ದಾರೆ. ಪರವಾನಗಿ ಪಡೆದುಕೊಳ್ಳಲು ವಿಳಂಬ, ಭೂಮಿ ಹಂಚಿಕೆ, ಹಣಕಾಸು ಸಂಸ್ಥೆಗಳ ಸಾಲ ಸೌಲಭ್ಯ ತಕರಾರುಗಳಿಂದಾಗಿ ಅನಿವಾಸಿ ಭಾರತೀಯರು ತವರು ನೆಲೆಯಲ್ಲಿ ಬಂಡವಾಳ ಹೂಡಿಕೆ ಮಾಡಲು ಹಿಂದೇಟು ಹಾಕಿದ್ದರು.

ಈಗ ಎಫ್‍ಕೆಸಿಸಿಐ ಅನಿವಾಸಿ ಭಾರತೀಯ ಕೋಶದ ಮಾದರಿಯಲ್ಲಿ ಎಫ್‍ಕೆಸಿಸಿಐ ಯಾವುದೇ ಫಲಾಪೇಕ್ಷೆ ಇಲ್ಲದೆ ಸಂಪೂರ್ಣ ಉಚಿತವಾಗಿ ಅನಿವಾಸಿ ಭಾರತೀಯ ಬಂಡವಾಳ ಹೂಡಿಕೆದಾರರಿಗೆ ನೆರವು ನೀಡಲು ಭರವಸೆ ನೀಡಿದ ನಂತರ ಬಹಳಷ್ಟು ಮಂದಿ ಮುಂದೆ ಬಂದಿದ್ದಾರೆ ಎಂದು ಹೇಳಿದರು.
ಎಫ್‍ಕೆಸಿಸಿಐ ಸೆಪ್ಟೆಂಬರ್ 15 ರಂದು ಆಯೋಜಿಸಿರುವ ಸಂಸ್ಥಾಪಕರ ದಿನಾಚರಣೆಯಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.

ಡಾಲರ್ ಹಾಗೂ ಕಚ್ಚಾ ತೈಲದ ಬೆಲೆ ಏರಿಳಿತದಿಂದಾಗಿ ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ತನ್ನ ತೆರಿಗೆಯನ್ನು ರಾಜ್ಯ ಸರ್ಕಾರ ತನ್ನ ಪಾಲಿನ ಸೆಸ್ ಅನ್ನು ಕಡಿಮೆ ಮಾಡಬೇಕೆಂದು ಸುಧಾಕರ್ ಶೆಟ್ಟಿ ಒತ್ತಾಯಿಸಿದರು.
ಪೆಟ್ರೋಲ್, ಡೀಸಲ್ ಬೆಲೆ ಜನಸಾಮಾನ್ಯರ ಕೈಗೆ ಎಟುಕದ ಮಟ್ಟಿಗೆ ಏರಿಕೆಯಾಗುತ್ತಿದೆ. ಇದರಿಂದ ಸಹಜವಾಗಿ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳ ಮೇಲೂ ಅಡ್ಡ ಪರಿಣಾಮ ಬೀರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಲಾಭಾಂಶ ಕಡಿಮೆ ಮಾಡಿಕೊಂಡು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ದರವನ್ನು ಇಳಿಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ