ಅಮಾಲಿ ಕಾರ್ಮಿಕರಿಂದ ಸೆ.25ರಂದು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

ಬೆಂಗಳೂರು, ಸೆ.11-ರಾಜ್ಯ ಉಗ್ರಾಣ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮಾಲಿ ಕಾರ್ಮಿಕರ ಕೂಲಿ ಹೆಚ್ಚಳ, ಕಿರುಕುಳಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಸೆ.25ರಂದು ಫ್ರೀಡಂಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರ್ನಾಟಕ ಶ್ರಮಿಕ ಶಕ್ತಿ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ವರದ ರಾಜೇಂದ್ರ, ಅಂದು ಬೆಳಗ್ಗೆ 10 ಗಂಟೆಗೆ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಮೂಲಕ ಫ್ರೀಡಂಪಾರ್ಕ್‍ಗೆ ತೆರಳಿಗೆ ಅನ್ನಭಾಗ್ಯ ಯೋಜನೆಯ ಸಗಟು ಗೋದಾಮುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಮಿಕರು ಮುಷ್ಕರ ನಡೆಸುವುದಾಗಿ ತಿಳಿಸಿದರು.

ಮುಷ್ಕರ ಸಂಬಂಧ ಸೆ.1 ರಂದು ಕಾನೂನು ಪ್ರಕಾರ ನೋಟೀಸ್ ನೀಡಲಾಗಿದೆ. ನೋಟೀಸ್ ಪರಿಗಣಿಸಿ ಸಮಸ್ಯೆ ಪರಿಹರಿಸಬೇಕೆಂದು ಮನವಿ ಮಾಡಿದ್ದೆವು. ಆದರೆ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿಲ್ಲ. 25ರೊಳಗೆ ಸಮಸ್ಯೆ ಬಗೆಹರಿಸದೆ ಇದ್ದರೆ ಧರಣಿ ನಡೆಸುವುದಾಗಿ ಎಚ್ಚರಿಸಿದೆ.
ಇಎಸ್‍ಐ, ಪಿಎಫ್ ಸೇರಿದಂತೆ ಗುತ್ತಿಗೆ ಮತ್ತು ಕಾರ್ಮಿಕರ ಕಾನೂನುಗಳನ್ನು ಜಾರಿ ಮಾಡಲು ಸೀನಿಯರ್ ಜಂಟಿ ನಿರ್ದೇಶಕರ ಮಟ್ಟದ ಒಬ್ಬ ಅಧಿಕಾರಿಯನ್ನು ರಾಜ್ಯಮಟ್ಟದಲ್ಲಿ ನೇಮಿಸಬೇಕು, ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಕ್ಕೆ ನಿರ್ದಿಷ್ಟ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸಬೇಕು. ಲೋಡಿಂಗ್ ಮತ್ತು ಅನ್‍ಲೋಡಿಂಗ್‍ಗೆ ಪ್ರತಿ ಕ್ವಿಂಟಾಲ್‍ಗೆ 30 ರೂ. ಕೂಲಿ ನಿಗದಿ ಮಾಡಬೇಕು. ಎಫ್‍ಸಿಐನಿಂದ ಬರುವ ಅಕ್ಕಿಯ ಅನ್‍ಲೋಡಿಂಗ್‍ಗೆ ಕ್ವಿಂಟಾಲ್‍ಗೆ 10 ರೂ. ಕೂಲಿ ನಿಗದಿ ಮಾಡಬೇಕು, ರಾಜ್ಯ ಉಗ್ರಾಣ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಕಾರ್ಮಿಕರಿಗೂ ಈ ಎಲ್ಲಾ ಸೌಲಭ್ಯ ದೊರೆಕಿಸಿಕೊಡಬೇಕೆಂದು ಒತ್ತಾಯಿಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ