ಎಫ್‍ಐಆರ್ ದಾಖಲಿಸುವ ಸಾಧ್ಯತೆ ಹಿನ್ನಲೆ: ಹಿರಿಯ ವಕೀಲರೊಂದಿಗೆ ಚರ್ಚಿಸಲು ಸಚಿವ ಡಿ.ಕೆ.ಶಿ ದೆಹಲಿಗೆ

ಬೆಂಗಳೂರು, ಸೆ.9- ಅಕ್ರಮ ಹಣ ಪತ್ತೆ ಆರೋಪ ಕುರಿತು ಜಾರಿ ನಿರ್ದೇಶನಾಲಯ ಎಫ್‍ಐಆರ್ ದಾಖಲಿಸುವ ಸಾಧ್ಯತೆ ಇರುವುದರಿಂದ ಹಿರಿಯ ವಕೀಲರೊಂದಿಗೆ ಚರ್ಚಿಸಲು ಸಚಿವ ಡಿ.ಕೆ.ಶಿವಕುಮಾರ್ ನವದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ಇಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ತಮ್ಮ ನಿವಾಸದಿಂದ ಬೆಂಗಾವಲು ಪಡೆ ಬಿಟ್ಟು ಡಿಕೆಶಿ ಅವರು ಖಾಸಗಿ ಕಾರಿನಲ್ಲಿ ತೆರಳಿದರು.
ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಮುನಿರತ್ನ ಅವರನ್ನು ಭೇಟಿ ಮಾಡಿ ಕೆಲಕಾಲ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ನೀಡಲು ಮುನಿರತ್ನ ನಿರಾಕರಿಸಿದ್ದಾರೆ.

ದೆಹಲಿಗೆ ತೆರಳುವ ಡಿಕೆಶಿ, ಕಾಂಗ್ರೆಸ್ ನಾಯಕರು, ಹಿರಿಯ ವಕೀಲರಾದ ಕಪಿಲ್ ಸಿಬಾಲ್ ಹಾಗೂ ಅಭಿಷೇಕ್ ಸಿಂಘ್ವಿ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಒಂದು ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ, ಬಂಧನವಾಗುವ ಪರಿಸ್ಥಿತಿ ಎದುರಾದರೆ ನಿರೀಕ್ಷಣಾ ಜಾಮೀನು ಪಡೆಯುವ ಬಗ್ಗೆಯೂ ಕೂಡ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಸದಾಶಿವನಗರದಿಂದ ರಹಸ್ಯ ಸ್ಥಳಕ್ಕೆ ಡಿಕೆಶಿ ತೆರಳಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಸಚಿವರ ಆಪ್ತರಿಗೂ ಯಾವುದೇ ಮಾಹಿತಿ ಸಿಗದೆ ಇದ್ದುದರಿಂದ ಡಿಕೆಶಿ ನಡೆ ನಿಗೂಢವಾಗಿದೆ. ರಾಜಕೀಯ ಮೇಲಾಟದಲ್ಲಿ ಏನಾಗಲಿದೆ ಎಂಬುದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ