ಅನ್ವರ್ ಮಾಣಿಪ್ಪಾಡಿ ವರದಿ ಬಹಿರಂಗವಾದರೆ; ಪ್ರಮುಖರು ರಾಜಕೀಯದಿಂದ ದೂರಾಗಬೇಕಾಗುತ್ತದೆ

ಬೆಂಗಳೂರು, ಸೆ.6- ಅನ್ವರ್ ಮಾಣಿಪ್ಪಾಡಿ ವರದಿ ಬಹಿರಂಗವಾದರೆ ಆಳುವ ಪಕ್ಷಗಳ ಹಲವಾರು ಪ್ರಮುಖರು ರಾಜಕೀಯದಿಂದ ದೂರಾಗಬೇಕಾಗುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ ಮತ್ತು ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಬಿಜೆಪಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ ಬಳಿ ನಡೆಸಿದ ಧರಣಿಯ ನೇತೃತ್ವ ವಹಿಸಿ ಮಾತನಾಡಿದರು.
ರಾಜ್ಯ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ನಮ್ಮ ಒತ್ತಾಯಕ್ಕೆ ಸ್ಪಂದಿಸಬೇಕು ಎಂದ ಅವರು, ಈಗಾಗಲೇ ವರದಿ ಮಂಡಿಸುವಂತೆ ಸಭಾಪತಿ ಹಾಗೂ ರಾಜ್ಯಪಾಲರು ಆದೇಶ ನೀಡಿದ್ದಾರೆ. ಅಲ್ಲದೆ, ಹೈಕೋರ್ಟ್ ಸಹ ಆದೇಶಿಸಿ ನಾಲ್ಕು ವಾರಗಳಲ್ಲಿ ಸದನ ಕರೆದು ವರದಿ ಮಂಡಿಸುವಂತೆ ಸೂಚಿಸಿದೆ. ಹಾಗಿದ್ದೂ ಸರ್ಕಾರ ವರದಿ ಮಂಡಿಸುವ ಬಗ್ಗೆ ನನಗೆ ಅನುಮಾನವಿದೆ ಎಂದರು.
ಸರ್ಕಾರ ಈ ವರದಿಯಂತೆ ಕ್ರಮ ಕೈಗೊಳ್ಳದಿದ್ದರೆ ಶಾಪ ತಟ್ಟುತ್ತದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ವಕ್ಫ್ ಕಮಿಟಿ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮಾತನಾಡಿ, ಸಮ್ಮಿಶ್ರ ಸರ್ಕಾರ ಸೂಕ್ತ ಸ್ಪಂದನೆ ನೀಡಬೇಕು. ಇಲ್ಲವಾದರೆ ಈ ಅಕ್ರಮದಲ್ಲಿ ಭಾಗಿಯಾದವರ ಬಗ್ಗೆ ಮಸಿ ಬಳಿಯಬೇಕಾಗುತ್ತದೆ. ವರದಿ ಕೊಟ್ಟ ನಂತರ ನನಗೆ ಜೀವ ಬೆದರಿಕೆ ಬರುತ್ತಿದೆ. ಇಂದೂ ಸಹ ಇಂಟರ್‍ನೆಟ್‍ನಲ್ಲಿ ಬೆದರಿಕೆ ಪತ್ರ ಬಂದಿದೆ ಎಂದರು.
ನನ್ನನ್ನು ತೆಗೆದರೂ ಸಹ ಈ ಹೋರಾಟ ನಿಲ್ಲುವುದಿಲ್ಲ. ವಕ್ಫ್ ಆಸ್ತಿ ಮರಳಿ ಪಡೆಯುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.
ದೂರ ಉಳಿದ ಬಿಎಸ್‍ವೈ: ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆಗೆ ಒತ್ತಾಯಿಸಿ ಶಾಸಕರು ನಡೆಸಿದ ಧರಣಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೂರವೇ ಉಳಿದಿದ್ದರು. ಬೆಂಗಳೂರಿನಲ್ಲೇ ಇದ್ದರೂ ಶಾಸಕರ ಧರಣಿಯಲ್ಲಿ ಪಾಲ್ಗೊಳ್ಳದೆ ಅಚ್ಚರಿ ಮೂಡಿಸಿದ್ದಾರೆ.
ಶಾಸಕರಾದ ಆರ್.ಅಶೋಕ್, ಸುರೇಶ್‍ಕುಮಾರ್, ಕೆ.ಪಿ.ನಂಜುಂಡಿ, ಆಯನೂರು ಮಂಜುನಾಥ್, ಹರತಾಳು ಹಾಲಪ್ಪ, ಮಾಜಿ ಸ್ಪೀಕರ್ ಡಿ.ಎಚ್.ಶಂಕರಮೂರ್ತಿ, ಲೆಹರ್‍ಸಿಂಗ್, ತೇಜಸ್ವಿನಿ ರಮೇಶ್, ಅಬ್ದುಲ್ ಅಜೀಂ, ಗೋ.ಮಧುಸೂದನ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ