ಉಪಮುಖ್ಯಮಂತ್ರಿ ನಗರ ಪ್ರದಕ್ಷಿಣೆ

ಬೆಂಗಳೂರು, ಸೆ.4-ನಗರ ಪ್ರದಕ್ಷಿಣೆ ಕೈಗೊಂಡ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರಾಜಕಾಲುವೆ, ಬಿಬಿಎಂಪಿ ವ್ಯಾಪ್ತಿಯ ಶಾಲೆಗಳು, ಕೊಳಚೆ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಸ್ಥಳೀಯರ ಕುಂದುಕೊರತೆ ಆಲಿಸುವ ಜೊತೆಗೆ ಅವರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಬೆಳಗ್ಗೆ ಮೆಯೋಹಾಲ್‍ನಿಂದ ನಗರ ಪ್ರದಕ್ಷಿಣೆ ಆರಂಭಿಸಿದ ಪರಮೇಶ್ವರ್ ಅವರು ಹಲಸೂರಿನ ಗುರುದ್ವಾರಕ್ಕೆ ಭೇಟಿ ನೀಡಿ ನಂತರ ಎದುರಿನ ರಾಜಕಾಲುವೆ ಪರಿಶೀಲಿಸಿದರು.
ಈ ವೇಳೆ ಕಸ ಕಡ್ಡಿ ಹಾಗೂ ಕೊಳಚೆಯಿಂದ ತುಂಬಿ ಹೋಗಿದ್ದ ಕಾಲುವೆಯನ್ನು ಹತ್ತು ದಿನಗಳೊಳಗೆ ಸ್ವಚ್ಛಗೊಳಿಸಿ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಅಲ್ಲಿಂದ ಯಲ್ಲಮ್ಮ ಕೋಳಿ ಸ್ಟ್ರೀಟ್‍ಗೆ ಭೇಟಿ ನೀಡಿದಾಗ ಅಲ್ಲಿನ ಕೊಳಚೆಪ್ರದೇಶದಲ್ಲಿ 25 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ 27 ಮನೆಗಳು ಮಳೆಗೆ ಸೋರುತ್ತಿದ್ದು, ಶಿಥಿಲಗೊಂಡಿರುವ ಮನೆಗಳ ದುರಸ್ತಿಗೆ ಸ್ಥಳೀಯರು ಮನವಿ ಮಾಡಿದರು.
ಇದಕ್ಕೆ ಸ್ಥಳದಲ್ಲೇ ಹಾಜರಿದ್ದ ಶಾಸಕ ರೋಷನ್‍ಬೇಗ್, ಹಳೇ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ನಿರ್ಮಿಸಿಕೊಟ್ಟರೆ ನಿಮಗೆ ಒಪ್ಪಿಗೆಯೇ ಎಂದು ಕೆಲವರನ್ನು ಪ್ರಶ್ನಿಸಿದಾಗ ಎಲ್ಲರೂ ಸಮ್ಮತಿಸಿದರು.
ಈ ವೇಳೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನೂತನ ಮನೆ ನಿರ್ಮಾಣ ಮಾಡಿಕೊಡಲು ಡಿಸಿಎಂ ಭರವಸೆ ನೀಡಿದರು.
ಅಲ್ಲಿಂದ ಸ್ವಲ್ಪ ದೂರದ ಅಂತರದಲ್ಲಿದ್ದ ಮತ್ತೊಂದು ರಾಜಕಾಲುವೆ ಬಳಿ ತೆರಳಿದಾಗ ಬಿಬಿಎಂಪಿ ವ್ಯಾಪ್ತಿಗೆ ಬರುವ ಮುನಿವೆಂಕಟಪ್ಪ ಕಾಲೋನಿಯ 546 ನಿವೇಶನಗಳಲ್ಲಿ ನಿರ್ಮಿಸಿರುವ ಮನೆಗಳು ಸಹ ಸಾಕಷ್ಟು ಶಿಥಿಲಗೊಂಡಿದ್ದು, ಕಳೆದ 45 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಮನೆಗಳ ಜಾಗವನ್ನು 99 ವರ್ಷಗಳ ಭೋಗ್ಯಕ್ಕೆ ನೀಡಲಾಗಿದೆ. ಆ ಜಾಗದ ಹಕ್ಕು ಪತ್ರವನ್ನು ನೀಡುವಂತೆ ಸ್ಥಳೀಯರು ಪರಮೇಶ್ವರ್ ಅವರಿಗೆ ಮನವಿ ಮಾಡಿದರು.
ಹಕ್ಕುಪತ್ರ ನೀಡುವ ಬಗ್ಗೆ ಯೋಚಿಸೋಣ. ಆದರೆ ಇಷ್ಟೊಂದು ಶಿಥಿಲಗೊಂಡಿರುವ ಮನೆಗಳನ್ನು ಮೊದಲು ಕೊಳಚೆ ನಿರ್ಮೂಲನಾ ಮಂಡಳಿ ಮರು ನಿರ್ಮಾಣ ಮಾಡಿಕೊಡಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲಿಂದ ಅನತಿ ದೂರದಲ್ಲಿದ್ದ ಬಿಬಿಎಂಪಿಗೆ ಸೇರಿದ ಜಾಗದಲ್ಲಿರುವ ಜಿಮ್ ಹೌಸ್‍ನಿಂದ ಯಾವುದೇ ಪ್ರಯೋಜನವಿಲ್ಲದೆ ಕಟ್ಟಡ ಬೇರೆ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವ ಬಗ್ಗೆ ಸ್ಥಳೀಯರು ಪರಮೇಶ್ವರ್ ಅವರ ಗಮನ ಸೆಳೆದಾಗ ಸ್ಥಳ ದುರುಪಯೋಗವಾಗುವ ಬದಲಿಗೆ ಆ ಸ್ಥಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಡಯಾಲಿಸಿಸ್ ಕೇಂದ್ರ ತೆರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಅಲ್ಲಿನ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡಿದ ಬಳಿಕ ಸತ್ಯನಾರಾಯಣ ದೇಗುಲ ಬಳಿಯ ಬಿಬಿಎಂಪಿ ಶಾಲೆ ಆವರಣ ಪರಿಶೀಲನೆ ನಡೆಸಿ ಇಲ್ಲಿರುವ 2.5 ಎಕರೆ ಜಾಗ ಒಂದು ಸುವರ್ಣ ಭೂಮಿಯಾಗಿದ್ದು, ವೃಥಾ ಇದನ್ನು ಖಾಲಿ ಬಿಟ್ಟಿರುವುದರಿಂದ ಆ ಜಾಗದಲ್ಲಿ ಶಾಲೆ, ಜಿಮ್, ಡಿಜಿಟಲ್ ಲೈಬ್ರರಿ ನಿರ್ಮಿಸಿ ಸ್ಥಳೀಯರ ಅನುಕೂಲಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶಿಸಿದರು. ಬಿಬಿಎಂಪಿ ಶಾಲೆಯಲ್ಲಿನ ಲೈಬ್ರರಿಗೆ ತೆರಳಿ ಪುಸ್ತಕಗಳ ಪರಿಶೀಲಿಸಿದರು.
ಹಲಸೂರು ಕೆರೆ ಹಿಂಭಾಗದ ಪ್ರದೇಶದಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿದಾಗ ನೀರಿನ ಸಮಸ್ಯೆ, ಒಳಚರಂಡಿ ಅವ್ಯವಸ್ಥೆ ಬಗ್ಗೆ ದೂರು ನೀಡಿದರೂ ಯಾರೊಬ್ಬರು ಬಂದು ಸರಿಪಡಿಸದಿರುವ ಬಗ್ಗೆ ತಿಳಿದು ಕೂಡಲೇ ಈ ಬಗ್ಗೆ ಕ್ರಮವಹಿಸುವಂತೆ ಹೇಳಿದರು. ನಂತರ ಹಲಸೂರು ಕೆರೆಯನ್ನು ವೀಕ್ಷಿಸಿದರು.
ನಗರ ಪ್ರದಕ್ಷಿಣೆ ವೇಳೆ ಪರಮೇಶ್ವರ್ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಹಾರ, ತುರಾಯಿಗಳನ್ನು ಹಾಕುತ್ತಾ ಅವರ ಓಲೈಸಲು ಮುಂದಾಗಿದ್ದರಿಂದ ನಗರಪ್ರದಕ್ಷಿಣೆ ಕೆಲಸದಲ್ಲಿ ವಿಳಂಬವಾಯಿತು.
ಪರಮೇಶ್ವರ್ ಸಂಚರಿಸಿದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‍ನಿಂದಾಗಿ 2-3 ಕಿಲೋ ಮೀಟರ್‍ವರೆಗೂ ವಾಹನಗಳು ಚಲಿಸದೆ ಸಂಚಾರದಟ್ಟಣೆನಿಂದ ಜನ ಪರದಾಡುವಂತಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ