ಸೌಥ್ಯಾಂಪ್ಟನ್: ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈ ಚೆಲ್ಲವು ನಾವು ಪಟ್ಟು ಸಡಿಲಿಸಿದ್ದೇ ಕಾರಣ ಎಂದೆನಿಸುತ್ತಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸೌಥ್ಯಾಂಪ್ಟನ್ ನಲ್ಲಿ ನಿನ್ನೆ ಮುಕ್ತಾಯವಾದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 60 ರನ್ ಗಳ ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಮಂಡಿಯೂರಿತ್ತು. ಈ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ತಂಡದ ಸೋಲಿಗೆ ಕಾರಣ ನೀಡಿದ್ದಾರೆ.
‘ಆರಂಭಿಕ ಮೂರು ದಿನಗಳ ಕಾಲ ಪಂದ್ಯ ನಮ್ಮ ಕೈ ಹಿಡಿತದಲ್ಲಿತ್ತು. ಬಹುಶಃ ಆ ಬಳಿಕ ನಾವು ಪಟ್ಟು ಸಡಿಲಿಸಿದ್ದೇ ಈ ಸೋಲಿಗೆ ಕಾರಣವಾಗಿರಬಹುದು. ನಾವು ಕೇವಲ 40 ರಿಂದ 50 ರನ್ ಗಳ ಕೊರತೆ ಎದುರಿಸಿದೆವು. ಇಲ್ಲಿ ನಾವು ನಿಜಕ್ಕೂ ಉತ್ತಮ ಪಂದ್ಯವನ್ನಾಡಿದೆವು. ಆದರೆ ಗೆಲುವು ನಮ್ಮದಾಗಲಿಲ್ಲ. ಗೆಲುವಿಗೆ ತೀರಾ ಸನಿಹಕ್ಕೆ ಆಗಮಿಸಿ ಅದನ್ನು ಪಡೆಯಲಾಗಲಿಲ್ಲ. ಗೆಲುವು ಮತ್ತು ಸೋಲಿನ ನಡುವೆ ಒಂದು ಗೆರೆ ಇರುತ್ತದೆ. ವಿದೇಶಿ ನೆಲದಲ್ಲಿ ಆಡುವಾಗ ಆ ಗೆರೆಯನ್ನು ದಾಟಿ ಗೆಲುವು ಸಾಧಿಸುವ ಕಲೆಯನ್ನು ನಾವು ಕರಗತ ಮಾಡಿಕೊಳ್ಳಬೇಕು. ಸ್ವದೇಶಿ ಪಂದ್ಯಗಳಲ್ಲಿ ನಮ್ಮ ಎದುರಾಳಿ ತಂಡಗಳು ತೀರಾ ದೊಡ್ಡ ಅಂತರದಲ್ಲೇ ಸೋತಿದ್ದವು ಎಂಬುದನ್ನು ಮರೆಯಬಾರದು ಎಂದು ಕೊಹ್ಲಿ ಹೇಳಿದ್ದಾರೆ.
ಆರಂಭದ ಮೂರು ದಿನಗಳಲ್ಲಿ ಪಂದ್ಯ ನಮ್ಮ ಹಿಡಿತದಲ್ಲೇ ಇತ್ತು. ಆದರೆ ಅಂತಿಮ ಹಂತದಲ್ಲಿ ಎದುರಾಳಿ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿ ನಮ್ಮಿಂದ ಪಂದ್ಯವನ್ನು ಕಸಿದರು. ಎರಡನೇ ಇನ್ನಿಂಗ್ಸ್ ಉತ್ತಮ ಜೊತೆಯಾಟಗಳ ಅವಶ್ಯಕತೆ ಇತ್ತು. ಮೊದಲ ಇನ್ನಿಂಗ್ಸ್ ಪೂಜಾರ ಶತಕ ನಮ್ಮ ಇನ್ನಿಂಗ್ಸ್ ಗೆ ಬಲ ತುಂಬಿತ್ತು. ಇಡೀ ತಂಡ ಉತ್ತಮ ಹೋರಾಟ ನೀಡಿತ್ತು. ಎಲ್ಲ ವಿಭಾಗದಲ್ಲೂ ಇಂಗ್ಲೆಂಡ್ ಗೆ ನಾವು ಪೈಪೋಟಿ ನೀಡಿದೆವು ಎಂದು ಕೊಹ್ಲಿ ಹೇಳಿದ್ದಾರೆ.
ತಂಡದ ಅಶ್ವಿನ್ ಪ್ರದರ್ಶನವನ್ನು ಕೊಂಡಾಡಿದ ಕೊಹ್ಲಿ, ಆರ್ ಅಶ್ವಿನ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಅವರ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವಾಗಿತ್ತು. ಸೂಕ್ತ ಸ್ಥಳದಲ್ಲೇ ಚೆಂಡನ್ನು ಪಿಚ್ ಮಾಡುವ ಮೂಲಕ ಎದುರಾಳಿ ಬ್ಯಾಟ್ಸಮನ್ ಗಳ ಮೇಲೆ ಒತ್ತಡ ಹೇರಿದ್ದರು. ಆದರೆ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ಸಿಗಲಿಲ್ಲ ಎಂದು ಹೇಳಿದ್ದಾರೆ. ಅಂತೆಯೇ 4ನೇ ಟೆಸ್ಚ್ ಪಂದ್ಯದ ಸೋಲಿಗೆ ಕಾರಣವಾದ ಇಂಗ್ಲೆಂಡ್ ತಂಡದ ಸ್ಪಿನ್ನರ್ ಮೊಯಿನ್ ಅಲಿ ಕುರಿತು ಮಾತನಾಡಿದ ಕೊಹ್ಲಿ, ಅಲಿ ಬೌಲಿಂಗ್ ಅತ್ಯುತ್ತಮವಾಗಿತ್ತು. ಅತ್ಯುತ್ತಮ ಜಾಗದಲ್ಲಿ ಚೆಂಡನ್ನು ಪಿಚ್ ಮಾಡುತ್ತಿದ್ದ ಅಲಿ, ನಿಜಕ್ಕೂ ವಿಕೆಟ್ ಪಡೆಯಲು ಅರ್ಹರಾಗಿದ್ದರು. ಅದರಲ್ಲಿ ಯಶಸ್ಸು ಕೂಡ ಪಡೆದರು ಎಂದು ಕೊಹ್ಲಿ ಹೇಳಿದ್ದಾರೆ.