ಇಂದಿನಿಂದ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಕಾರ್ಯಾರಂಭ; ಏನಿದರ ಉಪಯೋಗ

ಬೆಂಗಳೂರುಭಾರತೀಯ ಅಂಚೆ ಇಲಾಖೆಯು ಸೆ.1 ಶನಿವಾರದಿಂದ ದೇಶಾದ್ಯಂತ ‘ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ)’ ಸೇವೆಯನ್ನು ಪ್ರಾರಂಭಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ನಗರದ ಟೌನ್‌ಹಾಲ್‌ನಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್‌ ಅವರು ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯಲ್ಲಿ ಪ್ರಾರಂಭಿಸಲಾಗಿರುವ ಐಪಿಪಿಬಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ಅಂಚೆ ವಲಯದ ಚೀಫ್‌ ಪೋಸ್ಟ್‌ಮಾಸ್ಟರ್‌ ಜನರಲ್‌ ಚಾರ್ಲ್ಸ್ ಲೋಬೋ ಹೇಳಿದರು.

ಏನಿದು ಐಪಿಪಿಬಿ
ಬ್ಯಾಂಕಿಂಗ್‌ ಸೇವೆಗಳಿಂದ ವಂಚಿತರಾಗಿರುವ ಜನತೆ ಮತ್ತು ಅಲ್ಪ ಪ್ರಮಾಣದಲ್ಲಿ ಬ್ಯಾಂಕಿಂಗ್‌ ಸೇವೆಗಳನ್ನು ಹೊಂದಿರುವ ವರ್ಗಕ್ಕೆ ಪೂರ್ಣ ಪ್ರಮಾಣದ ಸೇವೆಯನ್ನು ಒದಗಿಸಲು ಇರುವ ಅಡೆತಡೆಗಳನ್ನು ನಿವಾರಿಸಿ, ಆರ್ಥಿಕ ಸೇರ್ಪಡೆಯ ಗುರಿಯನ್ನು ಸಾಧಿಸುವಲ್ಲಿ ಐಪಿಪಿಬಿ ಮುಖ್ಯ ಪಾತ್ರ ವಹಿಸಲಿದೆ. ‘ಮನೆ ಮನೆಗೂ ತಮ್ಮ ಬ್ಯಾಂಕ್‌’ ಎಂಬ ಧ್ಯೇಯದಿಂದ ಈ ಸೇವೆ ಆರಂಭವಾಗುತ್ತಿದೆ. ಗ್ರಾಹಕರು ಉಳಿತಾಯ ಖಾತೆ, ಚಾಲ್ತಿ ಖಾತೆ, ಹಣ ಸಂದಾಯ, ಹಣ ವರ್ಗಾವಣೆ, ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ, ನಾನಾ ಬಿಲ್‌ಗಳ ಪಾವತಿ, ಉದ್ಯಮಿಗಳಿಗೆ ಮತ್ತು ವ್ಯಾಪಾರಿಗಳಿಗೆ ಹಣ ಪಾವತಿ ಸೇವೆ ಪಡೆಯಬಹುದಾಗಿದೆ.

ಖಾತೆ ತೆರೆಯುವುದು ಹೇಗೆ

– ಯಾವುದೇ ಅರ್ಜಿ ಫಾರಂಗಳ ಅಗತ್ಯವಿಲ್ಲ.

– ಆಧಾರ್‌ ಕಾರ್ಡ್‌ ಮತ್ತು ಮೊಬೈಲ್‌ ಸಂಖ್ಯೆ ಸಾಕು.

– ಕಾಗದ ರಹಿತ ಖಾತೆ ತೆರೆಯುವ ಮತ್ತು ವ್ಯವಹಾರ ಮಾಡುವ ಬ್ಯಾಂಕ್‌ ಆಗಿದೆ.

– ಕನಿಷ್ಠ ಠೇವಣಿ ಅಗತ್ಯವಿಲ್ಲ.

– ನಮ್ಮ ಪ್ರತಿ ವ್ಯವಹಾರಕ್ಕೂ ಒಟಿಪಿ(ಒನ್‌ ಟೈಮ್‌ ಪಾಸ್‌ವರ್ಡ್‌) ಇರಲಿದೆ.

– ತ್ರೈಮಾಸಿಕ ಯೋಗ್ಯ ಬಡ್ಡಿಯಲ್ಲಿ ಒಂದು ಲಕ್ಷ ರೂ. ವರೆಗೆ ಠೇವಣಿ ಇಡಬಹುದು.

ಇದರ ವೈಶಿಷ್ಟ್ಯವೇನು

– ಪಾಸ್‌ಬುಕ್‌ ಬೇಕಿಲ್ಲ. ಖಾತೆಯ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ.

– ಗ್ರಾಹಕರಿಗೆ ‘ಕ್ಯೂಆರ್‌ ಕಾರ್ಡ್‌’ ನೀಡಲಾಗುತ್ತದೆ. ಇದರಲ್ಲೇ ಮಾಹಿತಿ ಇರುತ್ತದೆ.

– ಕ್ಯೂಆರ್‌ ಕಾರ್ಡ್  ಕಳೆದು ಹೋದರೂ ಆಧಾರ್‌ ಸಂಖ್ಯೆ, ಮೊಬೈಲ್‌ ನಂಬರ್‌ನಿಂದ ಖಾತೆ ಅಥವಾ ವ್ಯವಹಾರ ಮುಂದುವರಿಸಬಹುದು.

– ಕ್ಯೂಆರ್‌ ಕಾರ್ಡ್‌ಗಳನ್ನು ಎಟಿಎಂ ಅಥವಾ ಡಿಬಿಟ್‌ ಕಾರ್ಡ್‌ಗಳಂತೆ ಬಳಸಲು ಸಾಧ್ಯವಿಲ್ಲ.

– ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾ‌ನ್‌ ಮಾಡುವ ಮೂಲಕ ಸುಲಭವಾಗಿ ವ್ಯವಹಾರಿಸಬಹುದು.

– ದೇಶಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳಿವೆ.

– ಸುಮಾರು 3 ಲಕ್ಷ ಪೋಸ್ಟ್‌ ಮ್ಯಾನ್‌ಗಳು ಮನೆ ಬಾಗಿಲಿಗೇ ಬಂದು ಖಾತೆ ತೆರೆಯಲು ಸಹರಿಸಲಿದ್ದಾರೆ.

ಅನುಕೂಲಗಳೇನು

ನೇರ ನಗದು ಸೌಲಭ್ಯಗಳಾದ ಗ್ಯಾಸ್‌ ಸಬ್ಸಿಡಿ, ಸಾಮಾಜಿಕ ಭದ್ರತಾ ಪಿಂಚಣಿ, ವಿದ್ಯಾರ್ಥಿ ವೇತನ ಹಾಗೂ ಇತರೆ ಸಬ್ಸಿಡಿಗಳನ್ನು ಈ ಖಾತೆಯ ಮೂಲಕ ಪಡೆಯಬಹುದು. ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಗೃಹಿಣಿಯರು, ನಗರಕ್ಕೆ ವಲಸೆ ಬಂದಿರುವವರು, ರೈತರು, ಕಾರ್ಮಿಕರು, ರಾಜ್ಯ ಸರಕಾರದ ನೇರ ಫಲಾನುಭವಿಗಳು, ವ್ಯಾಪಾರಿಗಳು, ಸಣ್ಣ ಉದ್ಯಮಿಗಳಿಗೆ ಐಪಿಪಿಬಿ ಹೆಚ್ಚು ಅನುಕೂಲ ಒದಗಿಸಲಿದೆ.

ಅಂತರ್ಜಾಲ ಬ್ಯಾಂಕಿಂಗ್‌ 

ಬಸ್‌, ರೈಲ್ವೆ, ವಿಮಾನ ಟಿಕೆಟ್‌ ಬುಕಿಂಗ್‌ ಸೇವೆಗಳು ಹಾಗೂ ಎನ್‌ಇಎಫ್‌ಟಿ, ಆರ್‌ಟಿಜಿಎಸ್‌, ಐಎಂಪಿಎಸ್‌ ಆನ್‌ಲೈನ್‌ ಸೇವೆಗಳು ಸಹ ಲಭ್ಯಯಿವೆ. ಜತೆಗೆ ಇತರೆ ಆರ್ಥಿಕ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸಾಲ, ಹೂಡಿಕೆ, ವಿಮಾ ಸೌಲಭ್ಯಗಳನ್ನು ಸಹ ಒದಗಿಸಲಾಗುವುದು

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ