ಆಯುಷ್ಮಾನ್ ಭಾರತ್ ಯೋಜನೆ ಅಳವಡಿಸಿಕೊಳ್ಳದಿರಲು ತೀರ್ಮಾನ: ಹಣ ನಮ್ಮದು; ಕೀರ್ತಿ ಕೇಂದ್ರ ಸರ್ಕಾರದ್ದು : ಸಿಡಿದೆದ್ದ ರಾಜ್ಯ ಸರ್ಕಾರ

ಬೆಂಗಳೂರು,ಆ.30- ದೇಶದ ಪ್ರತಿಯೊಬ್ಬ ನಾಗರಿಕನಿಗೆ ಉತ್ತಮ ಆರೋಗ್ಯ ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಅಳವಡಿಸಿಕೊಳ್ಳದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕಳೆದ ಆ.15ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಸ್ವತಂತ್ರ ದಿನಾಚರಣೆ ಪ್ರಯುಕ್ತ ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಣೆ ಮಾಡಿದ್ದರು. ಸೆ.25ರಿಂದ ದೇಶಾದ್ಯಂತ ಈ ಯೋಜನೆ ಜಾರಿಯಾಗಲಿದೆ.
ಈ ಯೋಜನೆಯ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬದವರು ಐದು ಲಕ್ಷದವರೆಗೆ ವೈದ್ಯಕೀಯ ಚಿಕಿತ್ಸೆ ಪಡೆದರೆ ಕೇಂದ್ರ ಸರ್ಕಾರವೇ ಇದನ್ನು ಭರಿಸಲಿದೆ.

ಆದರೆ ಕೇಂದ್ರ ಸರ್ಕಾರ ಯೋಜನೆಗೆ ಕೇವಲ ಶೇ. 10ರಿಂದ 20ರಷ್ಟು ಹಣವನ್ನು ಭರಿಸುತ್ತದೆ. ಉಳಿದುದ್ದನ್ನು ರಾಜ್ಯ ಸರ್ಕಾರ ಭರಿಸಬೇಕು. ಹಣ ನಮ್ಮದು. ಇದರ ಕೀರ್ತಿ ಮತ್ತು ಯಶಸ್ಸು ಕೇಂದ್ರ ಸರ್ಕಾರಕ್ಕೆ ಸಲ್ಲುವುದರಿಂದ ನಾವೇಕೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಅಳವಡಿಸಿಕೊಳ್ಳಬೇಕೆಂಬ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟಿದೆ.
ಈಗಾಗಲೇ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಒದಗಿಸುವ ಕರ್ನಾಟಕ ಆರೋಗ್ಯ ಯೋಜನೆಯನ್ನು ಜಾರಿ ಮಾಡಿರುವಾಗ ಆಯುಷ್ಮಾನ್ ಭಾರತ್ ಯೋಜನೆ ಅಗತ್ಯವಿಲ್ಲಎಂಬುದು ರಾಜ್ಯ ಸರ್ಕಾರದ ವಾದ.
ಆಯುಷ್ಮಾನ್ ಭಾರತ್ ಯೋಜನೆಗೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಹಣ ಭರಿಸಿದರೆ ಮಾತ್ರ ಯೋಜನೆಯನ್ನು ಅನುಷ್ಠಾನ ಮಾಡಬಹುದು. 10ರಿಂದ 20ರಷ್ಟು ಹಣ ನೀಡಿದರೆ ಕರ್ನಾಟಕ ಆರೋಗ್ಯ ಯೋಜನೆಯೇ ಮುಂದುವರೆಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿರುವ ಕುಮಾರಸ್ವಾಮಿ ಈಗಾಗಲೇ ಹಿಂದಿನ ಕಾಂಗ್ರೆಸ್ ಕರ್ನಾಟಕ ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿ ಮಾಡಿದೆ. ಆಯುಷ್ಮಾನ್ ಭಾರತ್ ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಲಿ. ಶೇ.10ರಿಂದ 15ರಷ್ಟು ಹಣ ನೀಡಿ ಉಳಿದುದ್ದನ್ನು ನಾವೇ ಭರಿಸುವುದಾದರೆ ಯಾವ ಕಾರಣಕ್ಕೆ ಅನುಷ್ಠಾನ ಮಾಡಬೇಕು ಎಂದು ಪ್ರಶ್ನಿಸಿದರು.
ಈಗಾಗಲೇ ಆರೋಗ್ಯ ಕರ್ನಾಟಕ ಯೋಜನೆಗೆ 900 ಕೋಟಿ ಹಣವನ್ನು ತೆಗೆದಿರಿಸಲಾಗಿದೆ. ಸುಮಾರು 35 ಲಕ್ಷ ಫಲಾನುಭವಿಗಳು ಕರ್ನಾಟಕ ಆರೋಗ್ಯ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಾರೆ.
ರಾಜ್ಯದ ಸುಮಾರು 11 ಆಸ್ಪತ್ರೆಗಳಲ್ಲಿ ಈ ಯೋಜನೆ ಅನುಷ್ಠಾನದಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲ ಆಸ್ಪತ್ರೆಗಳಲ್ಲೂ ಜಾರಿ ಮಾಡಲಾಗುವುದು. ಈ ತಿಂಗಳ 28ಕ್ಕೆ ಅಂತ್ಯಗೊಂಡಂತೆ ಆರೋಗ್ಯ ಭಾಗ್ಯ ಯೋಜನೆಯಡಿ 2079 ಜನರು ಚಿಕಿತ್ಸೆ ಪಡೆದಿದ್ದಾರೆ. 10457 ಸರ್ಕಾರಿ ಆಸ್ಪತ್ರೆ ಹಾಗೂ 13622 ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಒಂದು ವೇಳೆ ಯಾರಾದರೂ ಮುಂಗಡವಾಗಿ ಹಣ ನೀಡಿ ಚಿಕಿತ್ಸೆ ಪಡೆದರೆ ಬಳಿಕ ಸರ್ಕಾರ ಅವರಿಗೆ ವೆಚ್ಚದ ಹಣವನ್ನು ಮರುಪಾವತಿಸಲಿದೆ. ರಾಜ್ಯ ಸರ್ಕಾರವೇ ಉಚಿತವಾಗಿ ಚಿಕಿತ್ಸೆ ನೀಡುವ ಯೋಜನೆಯನ್ನು ಆರಂಭಿಸಿರುವುದರಿಂದ ಆಯುಷ್ಮಾನ್ ಜಾರಿ ಮಾಡಿದರೆ ಇನ್ನಷ್ಟು ಹೊರೆಯಾಗಲಿದೆ ಎಂಬುದು ಸರ್ಕಾರದ ವಾದ.
ಹೀಗಾಗಿ ಕೇಂದ್ರದ ಈ ಯೋಜನೆಯನ್ನು ಅನುಷ್ಠಾನ ಮಾಡದಿರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ