ಜನಾಂದೋಲನಕ್ಕೆ ಕರೆ ನೀಡಿದ ದಲಿತ ಸಂಘಟನೆಗಳ ಒಕ್ಕೂಟ

ಬೆಂಗಳೂರು, ಆ.29-ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟ ಜನಾಂದೋಲನಕ್ಕೆ ಕರೆ ನೀಡಿದೆ ಎಂದು ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಒಕ್ಕೂಟದಿಂದ ವಿಧಾನಸೌಧ ಮುತ್ತಿಗೆ ಸೇರಿದಂತೆ ಹಲವು ಹಂತಗಳ ಹೋರಾಟಗಳು ನಡೆಸಲಾಗಿದ್ದು, ಆ.1 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, 14 ರಂದು ಸುಪ್ರೀಂಕೋರ್ಟ್‍ನಲ್ಲಿದ್ದ ಈ ಕುರಿತ ವಿಚಾರಣೆವರೆಗೆ ಕಾಲಾವಕಾಶ ಕೇಳಿದ್ದರು.

ಆ.14 ರಂದು ಕೋರ್ಟ್‍ನಿಂದ ಯಾವುದೇ ತೀರ್ಪು ಹೊರಡಿಸದಿದ್ದರೆ ಕಾಯ್ದೆಯನ್ನು ಕೂಡಲೇ ಅನುಷ್ಠಾಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೋರ್ಟ್ ಆ.28ಕ್ಕೆ ಮುಂದೂಡಿದ್ದು ಮತ್ತೆ ಸೆ.5ಕ್ಕೆ ಮುಂದೂಡಲಾಗಿದೆ. ಕೋರ್ಟ್ ವಿಚಾರಣೆಯನ್ನು ಮುಂದೂಡುವುದನ್ನೇ ನೆಪ ಮಾಡಿಕೊಂಡು ರಾಜ್ಯ ಕಾಯ್ದೆ ಅನುಷ್ಠಾನ ಮಾಡದಿರುವುದು ನಮ್ಮ ದಲಿತ ಜನಾಂಗಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದರು.
ಮುಖ್ಯಮಂತ್ರಿ ಈ ಕಾಯ್ದೆಯನ್ನು ಅನುಷ್ಠಾನ ಮಾಡುವುದಿಲ್ಲ ಎಂದು ನಮಗೆ ಸ್ಪಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ನಾವು ದಲಿತ ಜನಾಂದೋಲನಕ್ಕೆ ಕರೆ ನೀಡಿರುವುದಾಗಿ ತಿಳಿಸಿದರು.

ಎಸ್ಸಿ-ಎಸ್ಸಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಸುಪ್ರೀಂಕೋರ್ಟ್ ದುರ್ಬಲಗೊಳಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆದ ಪ್ರತಿಭಟನೆಯಿಂದಾಗಿ ಕೇಂದ್ರ ಸರ್ಕಾರ ಕಾಯ್ದೆ ಮೂಲ ಸ್ವರೂಪದ ಹೊಸ ಮಸೂದೆಯನ್ನು ಅಂಗೀಕರಿಸಿದೆ. ಈ ಕ್ರಮವನ್ನು ನಾವು ಅಭಿನಂದಿಸುತ್ತೇವೆ. ಕೇಂದ್ರ ಸಚಿವರಾದ ರಾಮ್‍ದಾಸ್ ಅಟವಾಳೆ ಅವರಿಗೆ ಸೆ.4 ರಂದು ಸಂಜೆ 3 ಗಂಟೆಗೆ ಒಕ್ಕೂಟದ ವತಿಯಿಂದ ಟೌನ್‍ಹಾಲ್‍ನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಅನಂತರಾಯಪ್ಪ, ಡಾ.ಎಂ.ವೆಂಕಟಸ್ವಾಮಿ, ಟಿ.ಎಸ್.ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ