ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಜಲಧಾರೆ ಯೋಜನೆ: ಸಚಿವ ಕೃಷ್ಣ ಭೈರೇಗೌಡ

ಹುಬ್ಬಳ್ಳಿ:ಆ-29: ರಾಜ್ಯದ ಎಲ್ಲಾ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರ ನೂತನವಾಗಿ 53 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜಲಧಾರೆ ಯೋಜನೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಕೃಷ್ಣ ಭೈರೇಗೌಡ ಅವರು ಹೇಳಿದರು.

ಅವರು ಇಂದು ಗ್ರಾಮೀಣಾಭಿವೃದ್ಧಿ ಪಂಚಾಯಾತ್ ರಾಜ್ ಇಲಾಖೆ ವತಿಯಿಂದ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಬಳಿಯ ಬಹುಗ್ರಾಮ ಯೋಜನೆಯಡಿ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಮತ್ತು ಇತರೆ 13 ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ಕುಡಿಯುವ ನೀರು ಒದಗಿಸುವ ಯೋಜನೆ, ಕಿರೇಸೂರು ಗ್ರಾಮ ಪಂಚಾಯತಿ, ಹೆಬಸೂರಿನಲ್ಲಿ ಸರ್ವ ಶಿಕ್ಷಣ ಅಭಿಯಾನದ ಅಡಿ ನಿರ್ಮಿಸಲಾಗುತ್ತಿರುವ ಶಾಲಾ ಕಟ್ಟಡ ಹಾಗೂ ಬ್ಯಾಹಟ್ಟಿ ಗ್ರಾಮದ ಕೆರೆಗಳು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದಡಿ ತೋಟಗಾರಿಕೆ ಇಲಾಖೆಯಿಂದ ರೈತ ಹುಲಗೆಪ್ಪನವರ ತೋಟದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಬಾಳೆ ಬೆಳೆಗಳನ್ನು ವೀಕ್ಷಿಸಿ, ಪರಿಶೀಲನೆ ನಡೆಸಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಲಧಾರೆ ಯೋಜನೆ: ಈ ಹಿಂದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವರಾಗಿದ್ದ ಹೆಚ್.ಕೆ. ಪಾಟೀಲ ಅವರ ಅವಧಿಯಲ್ಲಿ ಬಹುಗ್ರಾಮ ಯೋಜನೆಯಡಿ ರಾಜ್ಯದ ಹಲವಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕೆಲಸ ಮಾಡಲಾಗಿದೆ. ಸರ್ಕಾರ ಇಡೀ ರಾಜ್ಯದ ಗ್ರಾಮಗಳಿಗೆ ಶಾಶ್ವತವಾಗಿ ಸರ್ವ ಋತುಗಳಲ್ಲೂ ಕುಡಿಯುವ ನೀರು ಒದಗಿಸಲು ಜಲಧಾರೆ ಯೋಜನೆಯನ್ನು ರೂಪಿಸುತ್ತಿದೆ. ಯೋಜನೆಗೆ ಅಂದಾಜು 53000 ಕೋಟಿ ರುಪಾಯಿಗಳು ಬೇಕಾಗಿದ್ದು. ಸದ್ಯ ಸರ್ಕಾರ ಯೋಜನೆಯನ್ನು ಸಮಗ್ರವಾಗಿ ಯೋಜನೆಯನ್ನು ರೂಪಿಸುತ್ತಿದೆ. ಯೋಜನೆಗೆ ಬೇಕಾದ ನೀರಿನ ಮೂಲ, ಹಣ ಹಾಗೂ ತಾಂತ್ರಿಕ ರೂಪರೇಷೆಗಳು ತಯಾರು ಮಾಡಿದ ನಂತರ ಯೋಜನೆಯನ್ನು ಮುಂದಿನ ಐದಾರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಉದ್ದೇಶದಿಂದ ರಾಜ್ಯ ಎಂಟು ಜಿಲ್ಲೆಗಳಲ್ಲಿ ಅನುಷ್ಠಾನ ಗೊಳಿಸಲಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಯೋಜನೆಯನ್ನು ಪ್ರಧಾನವಾಗಿ ನದಿ ಹಾಗೂ ಅಣೆಕಟ್ಟುನಲ್ಲಿರುವ ನೀರಿನ ಲಭ್ಯತೆಯ ಮೇಲೆ ರೂಪಿಸಲಾಗುತ್ತಿದೆ.  ಯಾವ ನೀರಿನ ಮೂಲಗಳಿಂದ ಯಾವ ಸ್ಥಳಗಳಿಗೆ ನೀರು ಒದಗಿಸಬೇಕು ಎಂಬುದರ ನೀಲನಕ್ಷೆ ತಯಾರಿಸಲಾಗುತ್ತಿದೆ. ಇದರಿಂದ ರಾಜ್ಯ ಬಹುತೇಕ ಪ್ರದೇಶಗಳಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ.

ಮಹದಾಯಿ ನೀರಿನ ಬಳಕೆ ಬಗ್ಗೆ ನೀರಾವರಿ ಇಲಾಖೆಯಿಂದ ಯೋಜನೆ: ಮಹದಾಯಿ ನದಿ ನ್ಯಾಯಾಧೀಕರಣದ ತೀರ್ಪಿನಿಂದ ರಾಜ್ಯ ಲಭಿಸಿರುವ ನೀರಿನ ಬಳಕೆ ಕುರಿತು ನೀರಾವರಿ ಇಲಾಖೆಯಿಂದ ಯೋಜನೆ ತಯಾರು ಮಾಡಲಾಗುವುದು. ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರೆ ನಗರ ಪ್ರದೇಶಗಳಿಗೆ ಮಹದಾಯಿ ನದಿ ನೀರಿನಿಂದ ಹೆಚ್ಚಿನ ಕುಡಿಯುವ ನೀರು ಲಭ್ಯವಾಗಲಿದೆ. ಇನ್ನು ಉಳಿದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾದಾಯಿ ನೀರಿನ ಬಳಕೆ ಕುರಿತು ವಿಸ್ತøತ ಯೋಜನೆಯನ್ನು ತಯಾರಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವೀಕ್ಷಣೆ: ಹುಬ್ಬಳ್ಳಿಯ ಕಿರೇಸೂರಿನ ಬಳಿ ಯರಿನಾರಾಯಣಪುರ ಮತ್ತು ಇತರೆ 13 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುಲು ನಿರ್ಮಿಸಲಾಗಿರುವ ಬಹುಗ್ರಾಮ ಯೋಜನೆಯನ್ನು ವೀಕ್ಷಿಸಿ ಸಚಿವರು ಮಾಹಿತಿ ಪಡೆದರು.

ಕುಂದಗೋಳ ತಾಲೂಕಿನ 14 ಗ್ರಾಮಗಳ 30 ಸಾವಿರ ಜನರಿಗೆ ಯೋಜನೆಯಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ನೀರಿನ ಶುದ್ಧತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಅಗತ್ಯ ಬಿದ್ದರೆ, ಮುಂದಿನ ಹಂತದ ನೀರಿನ ಶುದ್ಧೀಕರಣ ಘಟಕವನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಅಧಿಕಾರ ವಿಕೇಂದ್ರಿಕರಣದ ಪಾಠ ಹೇಳಿದ ಸಚಿವರು : ಕಿರೇಸೂರಿನ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಗ್ರಾಮದ ಜನಸಂಖ್ಯೆ, ಪಂಚಾಯತಿ ಸಿಬ್ಬಂದಿ, ಸ್ವಚ್ಛ ಭಾರತ ಯೋಜನೆ ಅಡಿ ನಿರ್ಮಿಸಲಾಗಿರುವ ಶೌಚಾಲಯಗಳನ್ನು ಸಾರ್ವಜನಿಕ ಬಳಸುತ್ತಿರುವ ಕುರಿತು ಹಾಗೂ ಕಸ ವಿಲೇವಾರಿ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ಗ್ರಾಮದ ಹಲವಾರು ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರಿಗೆ ಸಚಿವರು ಅಧಿಕಾರ ವಿಕೇಂದ್ರಿಕರಣದ ಪಾಠ ಹೇಳಿದರು. ಗ್ರಾಮ ಪಂಚಾಯತಿಗಳು ಸ್ಥಳೀಯ ಸರ್ಕಾರಗಳಾಗಿವೆ. ಪಂಚಾಯತ್ ರಾಜ್ಯ ಅಧಿನಿಮಯದ ಅಡಿ ಗ್ರಾಮ ಪಂಚಾಯತಿಗಳಿಗೆ ಪ್ರದತ್ತವಾಗಿರುವ ಅಧಿಕಾರಗಳನ್ನು ಉಪಯೋಗಿಸಿಕೊಂಡು ಗ್ರಾಮದ ಸಮಸ್ಯೆಗಳನ್ನು ಸ್ವತಃ ಪಂಚಾಯತಿಗಳೇ ಬಗೆ ಹರಿಸಬೇಕು. ಕಿರೇಸೂರು ಗ್ರಾಮದಲ್ಲಿ ಸುಮಾರು 2350 ಜಾಬ್ ಕಾರ್ಡಗಳನ್ನು ಹೊಂದಿರುವ ಅಕುಶಲ ಕಾರ್ಮಿಕರಿದ್ದಾರೆ. ಇವರಿಗೆ ಮನರೇಗಾದ ಅಡಿಯಲ್ಲಿ ವಾರ್ಷಿಕವಾಗಿ 20 ಸಾವಿರ ಮಾನವ ದಿನಗಳಿಗೂ ಅಧಿಕವಾಗಿ ಕೆಲಸ ನೀಡಬೇಕು. ಇದರ ಲೆಕ್ಕಾಚಾರದಲ್ಲಿ 5 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಗ್ರಾಮ ಪಂಚಾಯತಿ ಕೈಗೊಳ್ಳಬಹದು. ನರೇಗಾ ಕ್ರಿಯಾ ಯೋಜನೆಯಲ್ಲಿ ಚಕ್ ಡ್ಯಾಂ, ರೈತರ ಕಣ, ರಸ್ತೆ, ಕುಡಿಯುವ ನೀರಿನ ಮೂಲಗಳ ರಕ್ಷಣೆಗೆ ಕಾಮಗಾರಿಗಳನ್ನು ಸೇರಿಸಿ ಕೆಲಸ ನಿರ್ವಹಿಸಿ. ಅಧಿಕಾರ ಹಾಗೂ ಹಣ ಎರಡೂ ಗ್ರಾಮ ಪಂಚಾಯತಿಗಳಲ್ಲೇ ಇದೆ.  ಸದಸ್ಯರು ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಕಡೆ ಮುಖ ಮಾಡುವುದನ್ನು ಬಿಡಬೇಕು. ಕಳೆದ ವರ್ಷದಲ್ಲಿ ಕಿರೇಸೂರು ಗ್ರಾಮ ಪಂಚಾಯತಿಯಲ್ಲಿ ನರೇಗಾದ ಅಡಿ ಕೇವಲ 80 ಲಕ್ಷ ರೂಪಾಯಿಗಳನ್ನು ಮಾತ್ರ ಖರ್ಚುಮಾಡಲಾಗಿದೆ. ಈ ವರ್ಷದಲ್ಲಿ ಕನಿಷ್ಠ 1 ಕೋಟಿಗೂ ಹೆಚ್ಚಿನ ಕೆಲಸವನ್ನು ನರೇಗಾದಲ್ಲಿ ಅನುಷ್ಠಾನಗೊಳಿಸಬೇಕು. ನರೇಗಾದ ಅಡಿ ಕೆಲಸ ನಿರ್ವಹಿಸಿದವರ ಕೂಲಿ ಹಣವನ್ನು ಬ್ಯಾಂಕಿನ  ಬಾಕಿ ವಸೂಲಿಗೆ ಮುರಿದು ಕೊಳ್ಳದಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಸಚಿವರು ಹೇಳಿದರು.

ಗ್ರಾಮಪಂಚಾಯತಿ ಕರ ವಸೂಲಿಗೆ ಸೂಚನೆ: ಕಿರೇಸೂರು ಗ್ರಾಮ ಪಂಚಾಯತಿಯಲ್ಲಿ ಶೇ. 60 ರಷ್ಟೂ ಸಹ ತೆರಿಗೆ ಸಂಗ್ರಹವಾಗಿಲ್ಲ. ಇದನ್ನು ನಿರ್ಲಕ್ಷಿಸಬಾರದು. ವರ್ಷಕ್ಕೆ ಎರಡು ನೂರು ರೂಪಾಯಿಗಳ ತೆರಿಗೆ ಕಟ್ಟಲು ಜನ ಹಿಂಜರಿಯುವುದಿಲ್ಲ. ಗ್ರಾ.ಪಂ. ಅಧಿಕಾರಿಗಳು, ಸಿಬ್ಬಂದಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಕರ ವಸೂಲಿ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.

ವೈಯಕ್ತಿಕ ಸಾಮೂಹಿಕ ಸಾಲು ಶೌಚಾಲಯಗಳ ನಿರ್ಮಾಣ: ಜಿಲ್ಲೆಯಲ್ಲಿ 25,000 ಸಾವಿರ ಬಿಪಿಎಲ್ ಕುಟುಂಬಗಳಿಂದ ಶೌಚಾಲಯ ನಿರ್ಮಾಣಕ್ಕೆ ಬೇಡಿಕೆ ಇರುವುದನ್ನು ಜಿಲ್ಲಾ ಪಂಚಾಯತ ಕಾರ್ಯನಿರ್ವಾಣ ಅಧಿಕಾರಿಗಳಿಂದ ಸಚಿವರು ತಿಳಿದುಕೊಂಡರು. ಮನೆಗಳ ಸಮೀಪದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಸ್ಥಳಾವಕಾಶ ಇಲ್ಲದಿದ್ದರೆ. ಗ್ರಾಮ ಪಂಚಾಯತಿಗೆ ಸಂಬಂದ ಪಟ್ಟ ಸ್ಥಳದಲ್ಲಿ ಪ್ರತಿ ಕುಟುಂಬಕ್ಕೂ ಸಾಲಾಗಿ ಶೌಚಾಲಯಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಎಂದ ಸಚಿವರು ಸೂಚನೆ ನೀಡಿದರು.

ಸರ್ಕಾರದ ಯೋಜನೆಯ ಗರಿಷ್ಠ ಲಾಭ ರೈತರಿಗೆ ತಲುಪಿಸಲು ಸೂಚನೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದಡಿ ತೋಟಗಾರಿಕೆ ಇಲಾಖೆಯಿಂದ ಬ್ಯಾಹಟ್ಟಿ ಗ್ರಾಮದ ರೈತ ಹುಲಗೆಪ್ಪನವರ ತೋಟದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಬಾಳೆ ಬೆಳೆಗಳನ್ನು ಸಚಿವರು ವೀಕ್ಷಿಸಿದರು.

ಅಧಿಕಾರಿಗಳು ಸರ್ಕಾರದ ಯೋಜನೆಗಳ ನಿಯಮಗಳನ್ನು  ರೈತರಿಗೆ ತೊಂದರೆಯಾಗದಂತೆ  ವ್ಯಾಖ್ಯಾನಿಸಬೇಕು. ಇದರಿಂದ ರೈತರಿಗೆ  ಸರ್ಕಾರಿ ಯೋಜನೆಯ ಗರಿಷ್ಠ ಲಾಭ ದೊರಕುವುದು. ನೀರು ಮತ್ತು ಮಣ್ಣು ಮೆದುವಾಗಿಸಲು ಸೂಕ್ಷ್ಮ ಪೋಷಕಾಂಶಗಳ ಬಳಕೆ ಬಗ್ಗೆ ತೋಟಗಾರಿಕೆ ಅಧಿಕಾರಿಗಳು ರೈತರಿಗೆ ಸೂಚನೆ ನೀಡಬೇಕು. ತೋಟ ಹಾಗೂ ಜಮೀನ ಬಳಿ ಜಾನುವಾರುಗಳ ಮೇವಿನ ಉಪಯೋಗಕ್ಕೆ ಬರುವ ಗಿಡ ಮರಗಳನ್ನು ಬೆಳಸಲು ರೈತರನ್ನು ಪ್ರೋತ್ಸಾಹಿಸಬೇಕು ಹೇಳಿದರು.

ಬ್ಯಾಹಟ್ಟಿ ಹಾಗೂ ಕುಸುಗಲ್ ಗ್ರಾಮಗಳಿಗೆ ಮಲಪ್ರಭಾ ಕುಡಿಯುವ ನೀರು ಪೂರೈಸುವ ಕರೆಗಳು, ಸುಳ್ಳ ಗ್ರಾಮದಲ್ಲಿನ ಕೊಳವೆ ಬಾವಿ ಮರುಪೂರಣ ಘಟಕ, ಗ್ರಾಮ ವಿಕಾಸ ಯೋಜನಯಡಿ ನಿರ್ಮಿಸಿದ ಸಿ.ಸಿ. ರಸ್ತೆಗಳನ್ನು ಸಚಿವರು ವೀಕ್ಷಿಸಿದರು.

ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಿ.ಪಂ. ಸಿಇಓ ಸ್ನೇಹಲ್ ಆರ್, ಜಿ.ಪಂ. ಉಪಕಾರ್ಯದರ್ಶಿ ಹೆಚ್.ಜಿ.ಕೊರವರ್, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಜಿ.ಪಂ.ಮುಖ್ಯ ಕಾರ್ಯನಿರ್ವಾಹ ಇಂಜಿನಿಯರ್ ಮನೋಹರ ಮಂದೋಳಿ, ತೋಟಗಾರಿಕೆ ಉಪನಿರ್ದೇಶಕ ರಾಮಚಂದ್ರ ಮಡಿವಾಳ ಸೇರಿದಂತೆ ಇತರೆ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ