ಭಾರತದಲ್ಲಿ ದೂರು ಸ್ವೀಕರಿಸಲು ಅಧಿಕಾರಿ ನೇಮಿಸಿಲ್ಲ ಏಕೆ?: ವಾಟ್ಸ್‌ ಆ್ಯಪ್‌ಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಹೊಸದಿಲ್ಲಿ: ಭಾರತದಲ್ಲಿ ವಾಟ್ಸ್‌ ಆ್ಯಪ್ ದೂರು ನಿರ್ವಹಣಾ ಅಧಿಕಾರಿಯನ್ನು ಏಕೆ ನೇಮಿಸಿಲ್ಲ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣ ವಾಟ್ಸ್‌ ಆ್ಯಪ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್‌ನೋಟೀಸ್‌ ಜಾರಿ ಮಾಡಿದೆ ಎಂದು ಎಎನ್‌ಐ ವರದಿ ಮಾಡಿದೆ.

ಸರಕಾರ ಮತ್ತು ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ ಆ್ಯಪ್ ಮಧ್ಯೆ ಮಾತುಕತೆಗಳು ನಡೆದ ಬೆನ್ನಿಗೇ ಈ ನೋಟೀಸ್ ಜಾರಿಯಾಗಿದೆ.

ಕಳೆದ ವಾರ ವಾಟ್ಸ್‌ ಆ್ಯಪ್ ಸಿಇಓ ಕ್ರಿಸ್ ಡೇನಿಯಲ್ಸ್ ದಿಲ್ಲಿಗೆ ಆಗಮಿಸಿ ಐಟಿ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ಅವರನ್ನು ಭೇಟಿ ಮಾಡಿದ್ದರು. ಸುಳ್ಳು ಸಂದೇಶಗಳ ಕುರಿತ ದೂರುಗಳನ್ನು ಸ್ವೀಕರಿಸಲು ಕೂಡಲೇ ಅಧಿಕಾರಿಯೊಬ್ಬರನ್ನು ನೇಮಿಸುವಂತೆ ಸಚಿವರು ಕಂಪನಿಗೆ ಸೂಚಿಸಿದ್ದರು.

ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುವ ಸುಳ್ಳು ಸಂದೇಶಗಳನ್ನೇ ಆಧರಿಸಿ ಹಲವೆಡೆ ಸಮೂಹ ಥಳಿತ- ಹತ್ಯೆ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಸರಕಾರ ಮತ್ತು ಸಾಮಾಜಿಕ ಜಾಲತಾಣಗಳ ವಿರುದ್ಧ ತೀಕ್ಷ್ಣ ಟೀಕೆಗಳು ವ್ಯಕ್ತವಾಗಿದ್ದವು.

ದೇಶದ ಕಾನೂನಿಗೆ ಬದ್ಧವಾಗಿ ಕಾರ್ಯನಿರ್ವಹಿಸುವಂತೆ ಮತ್ತು ದುರುದ್ದೇಶಪೂರಿತ ಸಂದೇಶಗಳ ಮೂಲ ಪತ್ತೆಹಚ್ಚಲು ಸೂಕ್ತ ತಾಂತ್ರಿಕ ವಿಧಾನ ಅಭಿವೃದ್ಧಿಪಡಿಸುವಂತೆ ವಾಟ್ಸ್‌ ಆ್ಯಪ್‌ ಮುಖ್ಯಸ್ಥರಿಗೆ ಸಚಿವ ಪ್ರಸಾದ್‌ ಸೂಚಿಸಿದ್ದರು.

ಸಂದೇಶದ ಮೂಲ ಪತ್ತೆ ಬೇಡಿಕೆ ಹೊರತುಪಡಿಸಿ ಸರಕಾರದ ಉಳಿದೆಲ್ಲ ಬೇಡಿಕೆಗಳಿಗೆ ವಾಟ್ಸ್‌ ಆ್ಯಪ್‌ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಬಳಕೆದಾರರ ಡೇಟಾ ಗೂಢಲಿಪೀಕರಣ (ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌) ಆಗಿರುವುದರಿಂದ ಬಳಕೆದಾರರ ಖಾಸಗಿತನದ ರಕ್ಷಣೆಗಾಗಿ ಇರುವ ಈ ಸೌಲಭ್ಯವನ್ನು ಹಾಳುಗೆಡವಲಾಗದು ಎಂದು ವಾಟ್ಸ್‌ ಆ್ಯಪ್‌ ಸರಕಾರಕ್ಕೆ ತಿಳಿಸಿದೆ ಎಂದು ವರದಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ