ತಮ್ಮನ್ನು ಸಿಎಂ ಸ್ಥಾನದಿಂದ ಇಳಿಸಲು ಕಾಯುತ್ತಿರುವವರು ಶಾಸಕರೊಂದಿಗಿನ ಬಾಂಧವ್ಯವನ್ನು ಅರಿಯಬೇಕು: ಎಚ್.ಡಿಕೆ

 

ಬೆಂಗಳೂರು, ಆ.25- ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಯಾವುದೇ ತಂತ್ರವನ್ನು ಮಾಡುವುದಿಲ್ಲ ಎಂಬುದನ್ನು ಸಿಎಂ ಪಟ್ಟದಿಂದ ಇಳಿಸಲು ಯಾರು ಕಾಯುತ್ತಿದ್ದಾರೋ ಅವರು ಅರ್ಥ ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ಸಮಾಜ ಸಂಪರ್ಕ ವೇದಿಕೆ ವತಿಯಿಂದ ನಿರ್ಮಿಸಿದ್ದ ಮಹಿಳಾ ವಿದ್ಯಾರ್ಥಿನಿಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಕಾಯುತ್ತಿರುವವರು ಶಾಸಕರೊಂದಿಗೆ ಹೇಗೆ ವರ್ತಿಸುತ್ತಿದ್ದೇನೆ. ಅವರೊಂದಿಗೆ ಎಂಥಹ ಬಾಂಧವ್ಯ ಹೊಂದಿದ್ದೇನೆ ಎಂಬುದನ್ನು ನೋಡಬೇಕು ಎಂದರು. ರೈತರ ಸಾಲ ಮನ್ನಾ ಮಾಡುವ ನಮ್ಮ ನಿರ್ಧಾರಕ್ಕೆ ಹಲವರು ಅಡ್ಡಿಮಾಡಿದರು. ಈಗ ಸಾಲ ಮನ್ನಾ ಮಾಡುವ ಮೂಲಕ ಕೊಟ್ಟ ಭರವಸೆಯನ್ನು ಈಡೇರಿಸುತ್ತಿದ್ದೇವೆ. ಸಾಲ ಮನ್ನಾ ಮಾಡಿದ ಮಾತ್ರಕ್ಕೆ ರೈತರನ್ನು ಉಳಿಸುತ್ತೇವೆ ಎಂಬ ಭ್ರಮೆಯೂ ಇಲ್ಲ ಎಂದರು.

ಸೆ.3ರಂದು ಹೊಸ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ವಿಚಾರವನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದರ ಬಗ್ಗೆ ನನಗೆ ಚಿಂತೆಯಿಲ್ಲ. ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದು, ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ಆದರೆ, ಇರುವಷ್ಟು ದಿನ ಕೈಲಾದಷ್ಟು ಜನ ಸೇವೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಯಾವ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ. ಮಾಧ್ಯಮಗಳು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಾವ ಸೆ.3 ಎಂಬುದು ಸದ್ಯದಲ್ಲೇ ಗೊತ್ತಾಗಲಿ. ಈ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬ ಲಘು ಭಾವನೆ ಹೊಂದಿರುವ ಅಧಿಕಾರಿಗಳಿಗೆ ಸದ್ಯದಲ್ಲೇ ಛಾಟಿ ಬೀಸುವುದಾಗಿ ಎಚ್ಚರಿಸಿದರು.

ನಾನು ಜಾತಿ ಆಧಾರದ ಮೇಲೆ ಕೆಲಸ ಮಾಡಿಲ್ಲ. ಆದರೆ, ಯಾವ ಯಾವ ಅಧಿಕಾರಿಗಳು ಏನೇನು ಮಾಡುತ್ತಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇದೆ. ಇದೇ ತಿಂಗಳು ಸರ್ಕಾರ 100 ದಿನ ಪೂರೈಸುತ್ತಿದೆ. ಇಷ್ಟು ದಿನ ನೀವು ಏನು ಮಾಡಿದರೋ ಗೊತ್ತಿಲ್ಲ. ಮುಂದಾದರು ಜಾತಿ ಹಾಗೂ ಗುಂಪು ರಾಜಕೀಯ ಬಿಟ್ಟು ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೈ ಜೋಡಿಸಬೇಕು. ಇಲ್ಲವಾದರೆ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದು ಸಿಎಂ ಗರಂ ಆದರು.
ಉತ್ತಮವಾದ ಕೆಲಸಕ್ಕೆ ಮಾಧ್ಯಮಗಳು ಪೆÇ್ರೀ ನೀಡಬೇಕು. ಎಲ್ಲವನ್ನೂ ಹಳದಿ ಕಣ್ಣಿನಿಂದ ನೋಡಬಾರದು. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಕೈ ಚಾಚುವುದಿಲ್ಲ. ರಾಜ್ಯದ ಜನರು ನೀಡುವ ತೆರಿಗೆ ಹಣದಲ್ಲೇ ಪ್ರಾಮಾಣಿಕ ಆಡಳಿತ ನೀಡುವ ಭರವಸೆ ನೀಡಿದರು.
ಇಲಾಖಾವಾರು ಕಾರ್ಯಕ್ರಮಗಳನ್ನು ರೂಪಿಸಿ ಆಡಳಿತವನ್ನು ಬಿಗಿಗೊಳಿಸದಿದ್ದರೆ ಐದು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದರೂ ಏನೂ ಪ್ರಯೋಜವಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಆಡಳಿತದಲ್ಲಿ ಜಾತಿವಾರು ಪ್ರಭಾವ ಬೀರಿ ಜನರು ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಿದೆ. ಈ ಉದೇಶದಿಂದಲೇ ಎಲ್ಲ ವರ್ಗದ ಬಡವರನ್ನು ರಕ್ಷಿಸುವ ಉದ್ದೇಶದಿಂದ ಸಾಲ ಮನ್ನಾ ಮಾಡುವ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.
ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದರು. ಆಗ ಮೂರ್ನಾಲ್ಕು ತಿಂಗಳು ಕಾಯುವಂತೆ ಹೇಳಿದ್ದೆ. ಚಕ್ರಬಡ್ಡಿ, ಮೀಟರ್ ಬಡ್ಡಿ ತಪ್ಪಿಸಲು ಸರ್ಕಾರದಿಂದಲೇ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ. ಸರ್ಕಾರದ ವತಿಯಿಂದ ದಿನಕ್ಕೆ ಸಾವಿರರೂ ಬಡ್ಡಿ ರಹಿತ ಸಾಲ ನೀಡಲಾಗುವುದು. ದೈನಂದಿನ ಸಣ್ಣಪುಟ್ಟ ವ್ಯವಹಾರ ಮಾಡುವವರಿಗೆ ಇದು ಅನುಕೂಲವಾಗಲಿದೆ ಎಂದು ಹೇಳಿದರು.

ಶನಿವಾರ ಮಾತ್ರ ಜನತಾ ದರ್ಶನ:
ನಗರದ ಕಸ ವಿಲೇವಾರಿ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ರಮ ರೂಪಿಸಬೇಕಾಗಿದೆ. ಆದರೆ, ನಿತ್ಯ ಸಾವಿರಾರು ಜನ ತಮ್ಮ ಮನೆ ಹಾಗೂ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಕಡೆ ಬರುತ್ತಿದ್ದಾರೆ. ಇದರಿಂದ ಸಾಕಷ್ಟು ಸಮಯವೂ ಕೂಡ ವ್ಯಯವಾಗುತ್ತಿದೆ. ಇದರಿಂದ ಪ್ರತಿ ಶನಿವಾರ ಜನತಾ ದರ್ಶನ ಮಾಡಲು ನಿರ್ಧರಿಸಿದ್ದೇನೆ. ಅಂದು ಬೆಳಗ್ಗೆಯಿಂದ ಸಂಜೆವರೆಗೂ ಜನರ ಸಮಸ್ಯೆಯನ್ನು ಆಲಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಶಾಸಕ ಎಂ.ಕೃಷ್ಣಪ್ಪ ಅವರು ರಸ್ತೆ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಲವು ರಸ್ತೆಗಳು ಅಭಿವೃದ್ಧಿಯಾಗಬೇಕಾಗಿದೆ. ಹಾಸ್ಟೆಲ್ ನಿರ್ಮಾಣದಂತಹ ಸಮಾಜ ಸೇವಾ ಕಾರ್ಯಗಳು ಅನಿವಾರ್ಯ ಎಂದರು.
ಇದಕ್ಕೂ ಮುನ್ನ ಶಾಸಕ ಎಂ.ಕೃಷ್ಣಪ್ಪ ಅವರು ನಮ್ಮ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣದ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ