ಅಫ್ಜಲ್ ಗುರು ಕಸಬ್, ಕನ್ನಯ್ಯ ಅವರನ್ನು ಬೆಂಬಲಿಸುವ ಕಾಂಗ್ರೆಸ್‍ನವರೇನು ದೇಶಪ್ರೇಮಿಗಳೇ…?: ಮಾಜಿ ಮೇಯರ್ ಪ್ರಶ್ನೆ

 

ಬೆಂಗಳೂರು, ಆ.21- ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಭಯೋತ್ಪಾದಕ ಸಂಘಟನೆಗಳೆಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಮೇಯರ್ ಎಸ್.ಹರೀಶ್ ಅವರು ಉಗ್ರ ಅಫ್ಜಲ್ ಗುರು ಕಸಬ್, ಕನ್ನಯ್ಯ ಅವರನ್ನು ಬೆಂಬಲಿಸುವ ಕಾಂಗ್ರೆಸ್‍ನವರೇನು ದೇಶಪ್ರೇಮಿಗಳೇ ಎಂದು ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಕಟ್ಟುವ ಕೆಲಸದಲ್ಲಿ ಕಂಕಣ ತೊಟ್ಟಿರುವ ಆರ್‍ಎಸ್‍ಎಸ್ ಬಿಜೆಪಿಯವರ ದೇಶಪ್ರೇಮವನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಇಂತಹ ಸಂದರ್ಭದಲ್ಲಿ ದಿನೇಶ್ ಗುಂಡೂರಾವ್ ಅವರು ಭಯೋತ್ಪಾದಕ ಸಂಘಟನೆಗಳೆಂದು ಕರೆದಿರುವ ಕ್ರಮ ಅತ್ಯಂತ ಖಂಡನೀಯವಾಗಿದೆ.
ಗೌರಿ, ಪನ್ಸಾರೆ ಹತ್ಯೆ ಪ್ರಕರಣಗಳು ತನಿಖೆಯ ಹಂತದಲ್ಲಿವೆ. ಈಗಾಗಲೇ ದಿನೇಶ್ ಗುಂಡೂರಾವ್ ಅವರು ತೀರ್ಪು ಪ್ರಕಟಿಸಿ ಆರ್‍ಎಸ್‍ಎಸ್, ಬಿಜೆಪಿಯವರಿಗೆ ಭಯೋತ್ಪಾದಕ ಪಟ್ಟ ಕಟ್ಟಲು ಮುಂದಾಗಿದ್ದಾರೆ. ಇವರ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೇರಳ, ಕೊಡಗಿನಲ್ಲಿ ಸಂಭವಿಸಿದ ಜಲ ಪ್ರಳಯದಲ್ಲಿ ಆರ್‍ಎಸ್‍ಎಸ್ ಸ್ವಯಂಸೇವಕರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಯಾವುದೇ ಪ್ರಚಾರವಿಲ್ಲದೆ ಸಂತ್ರಸ್ತರ ಸೇವೆಯಲ್ಲಿ ನಿರತರಾಗಿದ್ದಾರೆ. ಕೇರಳದಲ್ಲಿ ಒಂಬತ್ತು ಮಂದಿ ಆರ್‍ಎಸ್‍ಎಸ್ ಕಾರ್ಯಕರ್ತರು ಸಂತ್ರಸ್ತರ ಸೇವೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಕೊಡಗಿನಲ್ಲಿ ನಿರಂತರ ಸೇವೆ ಮಾಡುತ್ತಿದ್ದಾರೆ. ಇಂತಹವರ ಸೇವೆಯನ್ನು ಭಯೋತ್ಪಾದನೆ ಎಂದು ಕರೆಯುವ ದಿನೇಶ್ ಗುಂಡೂರಾವ್ ಅವರಿಗೆ ಯಾವ ನೈತಿಕತೆ ಇದೆ ಎಂದು ಹರೀಶ್ ಪ್ರಶ್ನಿಸಿದ್ದಾರೆ.
ದೇಶಸೇವೆಯನ್ನು ಈಶಸೇವೆ ಎಂದು ಪರಿಗಣಿಸಿ ಕೆಲಸ ಮಾಡುವ ಆರ್‍ಎಸ್‍ಎಸ್‍ನವರನ್ನು ಭಯೋತ್ಪಾದಕರೆಂದು ಕರೆದವರಿಗೆ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದು ಹರೀಶ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ