ನಾಟಿಂಗ್ಹ್ಯಾಮ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಮಿಸ್ ಮಾಡಿಕೊಂಡರೂ ನಾಯಕನಾಗಿ ವಿದೇಶದಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆ ಮುರಿದಿದ್ದಾರೆ.
ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ಮೂರನೇ ಟೆಸ್ಟ್ ನ ಮೊದಲ ದಿನವೇ ಕೊಹ್ಲಿ ಈ ಸಾಧನೆ ಮಾಡಿದ್ದು, ವಿದೇಶದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಟೀಮ್ ಇಂಡಿಯಾ ನಾಯಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಷ್ಟೇ ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿರುವ ಕೊಹ್ಲಿ, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆಯನ್ನು ಸರಿಗಟ್ಟಿದ್ದರು. ಅಲ್ಲದೆ ನಾಯಕನಾಗಿ ಇಂಗ್ಲೆಂಡ್ ನೆಲದಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದರು.
ಇದೀಗ ಟೆಸ್ಟ್ ನಾಯಕನಾಗಿ ವಿದೇಶದಲ್ಲಿ ನಡೆದ 30 ಇನ್ನಿಂಗ್ಸ್ಗಳಲ್ಲಿ 1731 ರನ್ ಗಳಿಸಿದ್ದಾರೆ.
ಇನ್ನು ದಾದಾ ಖ್ಯಾತಿಯ ಸೌರವ್ ಗಂಗೂಲಿ ಅವರು ತಾವು ಆಡಿರುವ 43 ಇನ್ನಿಂಗ್ಸ್ಗಳಲ್ಲಿ 1591 ರನ್ ಗಳಿಸಿದ್ದಾರೆ.
ಅಂತೆಯೇ ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದವರ ಪೈಕಿ ಮಹೇಂದ್ರ ಸಿಂಗ್ ಧೋನಿ(10) ನಂತರದ ಸ್ಥಾನದಲ್ಲಿ ಕೊಹ್ಲಿ(8) ಗುರುತಿಸಿಕೊಂಡಿದ್ದಾರೆ.