
ಬೆಂಗಳೂರು: ನಟಿ ದಿಶಾ ಪೂವಯ್ಯ ಕುಟುಂಬಸ್ಥರು ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಸಿಲುಕಿಕೊಂಡಿದ್ದಾರೆ. ಸಹಾಯಕ್ಕಾಗಿ ಅಧಿಕಾರಿಗಳು, ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾರು ಸಿಗುತ್ತಿಲ್ಲ ಎಂದು ದಿಶಾ ಅಸಮಾಧಾನ ಹೊರಹಾಕಿದ್ದಾರೆ.
ಮಡಿಕೇರಿ ನಗರದಿಂದ 15 ಕಿ.ಮೀ.ದೂರದ ಮಂದಲಪಟ್ಟಿಯಲ್ಲಿ ತನ್ನ ತಾಯಿ ಹಾಗು ತಂದೆಯ ಕುಟುಂಬಸ್ಥರು ವಾಸವಾಗಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿಯುವ ಭಯದಲ್ಲಿ ಎಲ್ಲರೂ ಮನೆಯಿಂದ ಹೊರ ಬಂದು ಬೆಟ್ಟದ ಮೇಲೆ ನಿಂತಿದ್ದಾರೆ. ಒಂದು ಕಡೆ ನಮ್ಮ ತಾಯಿ ಕುಟುಂಸ್ಥರು ನದಿ ದಂಡೆ ಹತ್ತಿರ ನಿಂತಿದ್ದಾರೆ ಎಂಬ ವಿಷಯಗಳು ನನಗೆ ಗೊತ್ತಾಗಿದೆ. ಆದ್ರೆ ಯಾರೊಂದಿಗೂ ನಿರಂತರವಾಗಿ ಸಂಪರ್ಕ ಸಾಧಿಸಲು ಸಾಗುತ್ತಿಲ್ಲ ಎಂದು ದಿಶಾ ಭಾವುಕರಾದರು.
ಸಹಾಯಕ್ಕಾಗಿ ಜಿಲ್ಲಾಧಿಕಾರಿಗಳು, ಸಚಿವ ಸಾ.ರಾ.ಮಹೇಶ್ ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಕೆಲವರು ಫೋನ್ ರಿಸೀವ್ ಮಾಡುತ್ತಿಲ್ಲ. ಮತ್ತೆ ಕೆಲವರ ಫೋನ್ ಸ್ವಿಚ್ ಆಫ್ ಅಂತಾ ಬರುತ್ತಿದೆ. ಬೆಟ್ಟದ ಮೇಲೆ ಸುಮಾರು 25 ಕುಟುಂಬಗಳಿದ್ದು, ಮೂರು ದಿನಗಳಿಂದ ಅನ್ನ, ಬಟ್ಟೆ, ಸೂರು ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಅರಣ್ಯ ಪ್ರದೇಶದಲ್ಲಿ ಆನೆಗಳ ಕಾಟ ಇರೋದ್ರಿಂದ ಅಲ್ಲಿಯವರು ಮತ್ತಷ್ಟು ಭಯಭೀತರಾಗಿದ್ದಾರೆ. ಸಂತ್ರಸ್ತರಲ್ಲಿ ಒಂಬತ್ತು ತಿಂಗಳ ಮಗು ಸೇರಿದಂತೆ ಗರ್ಭಿಣಿಯೂ ಇದ್ದಾರೆ ಎಂದು ನನಗೆ ಹೇಳಿದ್ದಾರೆ. ಬೆಟ್ಟದ ಮೇಲಿರುವರನ್ನು ರಕ್ಷಿಸಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದಿಶಾ ಹೇಳಿದರು.
ನೆರೆಯ ಕೇರಳ ರಾಜ್ಯದಲ್ಲಿ ಮಂತ್ರಿಗಳು ಮತ್ತು ಅಧಿಕಾರಿಗಳು ತುಂಬಾ ಚಾಕಚಕ್ಯತೆಯಿಂದ ಕೆಲಸ ಮಾಡುತ್ತಿದ್ದಾರೆ. ತೀವ್ರಗತಿಯಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದೆ. ಕೇರಳಕ್ಕೆ ಹೋಲಿಸಿದ್ರೆ ನಮ್ಮ ರಕ್ಷಣಾ ಕಾರ್ಯಾಚರಣೆ ತುಂಬಾ ನಿಧಾನವಾಗಿದೆ ಎಂದು ಬೇಸರಸ ವ್ಯಕ್ತಪಡಿಸಿದರು.