ಬೆಂಗಳೂರು:ಆ-18: ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಸಂತ್ರಸ್ತರಾದವರ ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ. ಮಳೆಯಿಂದ ರಾಜ್ಯದಲ್ಲಿ ಉಂಟಾಗಿರುವ ವಿಷಮಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ಅವಿರತ ಶ್ರಮಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ ಸೇರಿ ಮಳೆಯಿಂದ ಹಾನಿಗೀಡಾದ ಜಿಲ್ಲೆಗಳ ಅಧಿಕಾರಿಗಳು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಳೆ ನಷ್ಟದ ಬಗ್ಗೆ 2-3 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ತೀವ್ರ ಮಳೆಯಿಂದಾಗಿ 11 ಸಾವಿರ ಮನೆಗಳು ಹಾನಿಗೊಳಗಾಗಿವೆ. ಸುಮಾರು 200 ಎಕರೆ ಪ್ರದೇಶದಲ್ಲಿ ಭೂ ಕುಸಿತವಾಗಿದೆ. ಅಧಿಕಾರಿಗಳು 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಕೊಡಗಿನಲ್ಲಿ ಸುಮಾರು 30 ಕಡೆ ಗಂಜಿ ಕೇಂದ್ರ ತೆರೆಯಲಾಗಿದೆ, ಎಲ್ಲಾ ಎಟಿಎಂಗಳಲ್ಲಿ ಹಣ ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ವಸ್ತುಗಳನ್ನು ಹೆಲಿಕಾಫ್ಟರ್ ಮೂಲಕ ರವಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಭದ್ರತಾ ಸಿಬ್ಬಂದಿ, ಎನ್ ಡಿ ಆರ್ ಎಫ್, ಸೇನೆ ಅಗ್ನಿ ಶಾಮಕ ದಲ, ಹೋಮ್ ಗಾರ್ಡ್, ಸೇರಿದಂತೆ 1000 ಮಂದಿ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ, 200 ಎನ್ ಸಿಸಿ ಕೆಡೆಟ್ಸ್ ಕೂಡ ಭಾಗಿಯಾಗಿದ್ದು, ಕೊಡಗಿನಲ್ಲಿ ಸುಮಾರು 50 ಜೆಸಿಬಿಗಳು ಕೆಲಸ ಮಾಡುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಜೋಡು ಪಾಳ್ಯದಲ್ಲಿ 300 ಜನರನ್ನು ರಕ್ಷಿಸಲಾಗಿದೆ, ಇದುವರೆಗೂ 2500 ಮಂದಿ ರಕ್ಷಣೆ ಮಾಡಲಾಗಿದೆ, ಕೊಡಗು ಜಿಲ್ಲೆಯಲ್ಲೇ 2060 ಮಂದಿ ಆಶ್ರಯ ಪಡೆದಿದ್ದಾರೆ. ಪರಿಹಾರ ಕಾರ್ಯಗಳಿಗೆ ಕೈಜೋಡಿಸಲು ಹಲವು ಜಿಲ್ಲೆಗಳಿಂದ ವೈದ್ಯರು ತೆರಳಿದ್ದಾರೆ ಎಂದು ಹೇಳಿದರು.