ಅಪ್ರಾಪ್ತ ಬಾಲಕಿ ಅಪಹರಿಸಿ ಬಲತ್ಕಾರ: ಅಪರಾಧಿಗೆ 7 ವರ್ಷ ಸಜೆ

 

ಬೆಂಗಳೂರು,ಆ.17- ವಿವಾಹವಾಗಿರುವುದನ್ನು ಮರೆಮಾಚಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ ಬಲತ್ಕಾರ ಮಾಡಿದ್ದ ಆರೋಪಿಗೆ ಸಿಸಿಎಚ್ 54ನೇ ನ್ಯಾಯಾಲಯವು ಏಳು ವರ್ಷ ಸಜೆ ಹಾಗೂ 80 ಸಾವಿರ ರೂ. ದಂಡ ವಿಧಿಸಿದೆ.
ಬನಶಂಕರಿ ಮೂರನೇ ಹಂತ, ಮಂಜುನಾಥ ಕಾಲೋನಿ ನಿವಾಸಿ ಕಾಮಣ್ಣ ಅಲಿಯಾಸ್ ರವಿಕುಮಾರ್(22) ಶಿಕ್ಷೆಗೊಳಗಾದ ಆರೋಪಿ.
ಆರೋಪಿ ಕಾಮಣ್ಣ ವಿವಾಹವಾಗಿದ್ದರೂ ಸಹ ಅದನ್ನು ಮರೆಮಾಚಿ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಡಿಸೆಂಬರ್ 2, 2014ರಂದು ಸಂಜೆ 7 ಗಂಟೆ ಸಮಯದಲ್ಲಿ ಅಪಹರಿಸಿಕೊಂಡು ಹೋಗಿ ಬಲತ್ಕಾರ ಮಾಡಿದ್ದನು.

ಈ ಬಗ್ಗೆ ಸಿ.ಕೆ.ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‍ಐ ಕುಮಾರಸ್ವಾಮಿ ಅವರು ಪೆÇೀಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇನ್‍ಸ್ಪೆಕ್ಟರ್ ಬಿ.ಕೆ.ಶೇಖರ್ ತನಿಖೆ ಕೈಗೊಂಡು ಡಿಸೆಂಬರ್ 6ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಮೇರೆಗೆ ಆರೋಪಿಯು ಅಂದಿನಿಂದ ಏ.5, 2015ರವರೆಗೆ 120 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದನು.
ತದನಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿಯು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದರಿಂದ ಈತನ ವಿರುದ್ದ ವಾರೆಂಟ್ ಹೊರಡಿಸಲಾಗಿತ್ತು.
ಫೆಬ್ರವರಿ 6, 2018ರಂದು ಆರೋಪಿಯನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ನ್ಯಾಯಂಗ ಬಂಧನಕ್ಕೆ ಆದೇಶಿಸಿತು. ಇನ್‍ಸ್ಪೆಕ್ಟರ್ ಬಿ.ಕೆ.ಶೇಖರ್ ಅವರು ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಈ ಪ್ರಕರಣವು ಸಿಸಿಎಚ್ 54ನೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಎಂ.ಲತಾಕುಮಾರಿ ಅವರು ವಾದ-ಪ್ರತಿವಾದ ಆಲಿಸಿದ್ದು, ಪೆÇೀಕ್ಸೊ ಕಾಯ್ದೆಯಡಿ ಆರೋಪ ಸಾಬೀತಾದ ಮೇರೆಗೆ ಆರೋಪಿಗೆ ಏಳು ವರ್ಷ ಕಾರಾಗೃಹ ವಾಸ ಹಾಗೂ 80 ಸಾವಿರ ರೂ. ದಂಡ ವಿಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ