ಅಜಾತಶತ್ರುವಿನ ಅಂತಿಮ ಯಾತ್ರೆ ಆರಂಭ…

ನವದೆಹಲಿ:ಆ-17: ಅಜಾತಶತ್ರುಗೆ ಅಂತಿಮ ವಿದಾಯ ಹೇಳಲು ಸಕಲ ಸಿದ್ದತೆಗಳು ನಡೆದಿದ್ದು, ದೀನ ದಯಾಳ್‌ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಅಟಲ್ ಜಿ ಪಾರ್ಥೀವ ಶರೀರದ ಅಂತಿಮ ಯಾತ್ರೆ ಆರಂಭವಾಗಿದೆ.

ದೀನ್​ ದಯಾಳ್​ ಮಾರ್ಗದಿಂದ ಅಂತಿಮ ಯಾತ್ರೆ ಆರಂಭವಾಗಿದ್ದು, ಲಕ್ಷಾಂತರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಟಲ್ ಜಿ ಅಂತಿಮ ಯಾತ್ರೆಯಲ್ಲಿ ನಡೆದುಕೊಂಡೇ ಸಾಗಿದ್ದಾರೆ. ಅಟಲ್​ ಜೀ ಅಮರ್​ ರಹೇ… ಘೋಷ ಅಂತಿಮಯಾತ್ರೆಯುದ್ದಕ್ಕೂ ಮೊಳಗಿದೆ.

ವಾಜಪೇಯಿಯವರಿಗೆ ಅಂತಿಮ ವಿದಾಯ ಹೇಳಲು ಯಮುನಾ ನದಿ ತೀರದಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಬಿಗಿ ಭದ್ರತೆಯೊಂದಿಗೆ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಇಲ್ಲಿ ವಾಜಪೇಯಿ ದತ್ತು ಪುತ್ರಿ ನಮಿತಾ ಪತಿ ರಂಜನ್​ ಭಟ್ಟಾಚಾರ್ಯ ಅವರು ಅಟಲ್​ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ.

ಯಮುನಾ ನದಿ ತೀರದಲ್ಲಿರುವ ಜವಾಹರ್ ಲಾಲಿ ನೆಹರೂ (ಶಾಂತಿವನ) ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ (ವಿಜಯ್ ಘಾಟ್) ಅವರುಗಳ ಸಮಾಧಿಗಳ ನಡುವೆ, ಮಾಜಿ ಪ್ರಧಾನಿ ಗ್ಯಾನಿಜೇಲ್ ಸಿಂಗ್ ಅವರ ಸಮಾಧಿ ಏಕ್ತಾ ಸ್ಥಳ ಸಮೀಪ ರಾಷ್ಟ್ರೀಯ ಸ್ಮೃತಿ ಸ್ಥಳವಿದೆ. ಮಾಜಿ ಪ್ರಧಾನಿಗಳು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗಳು ಮತ್ತಿತರ ಪ್ರಮುಖ ರಾಷ್ಟ್ರೀಯ ನಾಯಕರು ನಿಧನರಾದಾಗ ಅಂತ್ಯ ಸಂಸ್ಕಾರ ನಡೆಸಲು ಈ ಸ್ಥಳವನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಹಿಂದೆ ರಾಷ್ಟ್ರೀಯ ನಾಯಕರು ಮೃತಪಟ್ಟಾಗ ರಾಜ್ ಘಾಟ್ ಬಳಿ ವಿಶಾಲವಾದ ಪ್ರದೇಶದಲ್ಲಿ ಅವರ ಅಂತ್ಯ ಸಂಸ್ಕಾರ ಮಾಜಿ ಸಮಾಧಿ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ಸಮಾಧಿಗಳನ್ನು ನಿರ್ಮಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲದಿರುವುದರಿಂದ ರಾಷ್ಟ್ರೀಯ ಸ್ಮತಿ ಸ್ಥಳ ನಿಗದಿಪಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ