ಉನ್ನತ ಶಿಕ್ಷಣ ಇಲಾಖೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು: ಬಸವರಾಜರಾಯರೆಡ್ಡಿ ಆಗ್ರಹ

 

ಬೆಂಗಳೂರು, ಆ.14-ಉನ್ನತ ಶಿಕ್ಷಣ ಇಲಾಖೆಯಲ್ಲಿ ಯೋಜನೆ ಮಂಜೂರಾಗಿ ಹಣ ನಿಗದಿಯಾಗಿದ್ದರೂ, ಕಾರ್ಯಕ್ರಮ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿದೆ ಎಂದು ಮಾಜಿ ಸಚಿವ ಬಸವರಾಜರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರವೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಸಭೆ ಕರೆದು ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 17 ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಾವು ಒಂದೂವರೆ ವರ್ಷ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ವೇಳೆ ಹಲವಾರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅದಕ್ಕೆ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಅನುದಾನವನ್ನೂ ಕಾಯ್ದಿರಿಸಲಾಗಿದೆ. ಸಮಗ್ರ ವಿಶ್ವವಿದ್ಯಾಲಯ ಕಾಯ್ದೆಗೆ ಉಭಯಸದನಗಳ ಒಪ್ಪಿಗೆ ಸಿಕ್ಕಿದೆ. ರಾಜ್ಯಪಾಲರ ಅಂಗೀಕಾರ ಬಾಕಿ ಇದೆ. ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಪ್ರತ್ಯೇಕ ವಿಶ್ವವಿದ್ಯಾನಿಲಯ ಮಸೂದೆಯು ಅಂಗೀಕಾರಗೊಂಡಿದೆ. ರಾಯಚೂರು ವಿವಿ, ಯುನಿಟರಿ ವಿವಿ, ಮಹಾರಾಣಿ ಕ್ಲಸ್ಟರ್ ವಿವಿಗಳ ಮಸೂದೆಗಳು ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿವೆ.
ರಾಜ್ಯಪಾಲರ ಒಪ್ಪಿಗೆ ಪಡೆದು ಅನುಷ್ಠಾಣಗೊಳಿಸುವುದು ಬಾಕಿ ಇದೆ ಎಂದ್ಠು ಹೇಳಿದರು.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಗೆ ಖಾಯಂ ನಿರ್ದೇಶಕರು, ಪ್ರಾಂಶುಪಾಲರು ಮತ್ತು ಖಾಯಂ ಸಿಬ್ಬಂದಿ ನೇಮಿಸಲು ಕ್ರಮಕೈಗೊಳ್ಳಬೇಕು. ವಸತಿ ಕಾಲೇಜಿನ ವಿದ್ಯಾರ್ಥಿ ನಿಲಯಕ್ಕೆ 50 ಕೋಟಿ ಅನುದಾನದ ಅಗತ್ಯವಿದ್ದು, ಅದನ್ನು ಆದ್ಯತೆ ಮೇಲೆ ಒದಗಿಸಬೇಕು.
ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಗೆ ಸ್ವಂತ ಕಟ್ಟಡ ನಿರ್ಮಿಸಲು ಭೂಮಿ ಲಭ್ಯವಿದೆ. ಆದರೆ ಅರಣ್ಯ ಇಲಾಖೆ ತಕರಾರಿನಿಂದಾಗಿ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು ಎಂದರು.
ತುಮಕೂರು ವಿವಿಗೆ ಜಮೀನು ಲಭ್ಯವಿದ್ದು, ಹಣವೂಇದೆ. ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲು ಸೂಕ್ತ ಸೂಚನೆ ನೀಡಬೇಕು.
ಮೈಸೂರು ಶ್ರೀಮತಿ ಗಂಗೂಬಾಯಿ ಹಾನಗಲ್ ಸಂಗೀತ ವಿವಿಗೆ ಜಮೀನು ಮತ್ತು ಹಣ ಎರಡೂ ಲಭ್ಯವಿದ್ದು ಕಾಮಗಾರಿ ಆರಂಭಿಸಲು ಸೂಕ್ತ ಸೂಚನೆ ನೀಡಬೇಕು.

ಧಾರವಾಡ ವಿವಿ ಸಮಗ್ರ ಸುಧಾರಣೆಗೆ 25 ಕೋಟಿ ರೂ. ಅನುದಾನ ನೀಡಲಾಗಿದೆ ಕಾಮಗಾರಿ ಆರಂಭವಾಗಿಲ್ಲ. ಮುಕ್ತ ವಿವಿಯ ವತಿಯಿಂದ ತಲಾ 50 ಕೋಟಿ ಖರ್ಚು ಮಾಡಿ 10 ಕಡೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕೋಲಾರ ಹೊರತುಪಡಿಸಿ ಉಳಿದ ಜಿಲ್ಲೆಯ ಯಾವ ಕಟ್ಟಡಗಳು ಸದ್ಬಳಕೆಯಾಗಿಲ್ಲ. ಕೂಡಲೇ ಆ ಕಟ್ಟಡಗಳನ್ನು ಬಳಕೆ ಮಾಡಿಕೊಳ್ಳಲು ನಿರ್ದೇಶನ ನೀಡಬೇಕು.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯಕ್ಕೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ ಪ್ರಾಧ್ಯಾಫಕರ ನೇಮಕಕ್ಕೆ ಕ್ರಮಕೈಗೊಳ್ಳಬೇಕು. ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ 570 ಕೋಟಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 350 ಕೋಟಿ ಹಣ ಠೇವಣಿ ಇದೆ.
ಬೆಳಗಾವಿ ವಿವಿಯ ಹಣ ಬಳಕೆಯಾಗದ ಕಾರಣ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿತ್ತು. ನ್ಯಾಯಾಧೀಕರಣದಲ್ಲಿ ಹೋರಾಟ ಮಾಡಿದರ ಫಲವಾಗಿ ಬಡ್ಡಿ ಸಮೇತ 570 ಕೋಟಿ ಹಣ ವಾಪಸ್ ಬರುತ್ತಿದೆ. ಈ ಎರಡೂ ಸಂಸ್ಥೆಗಳಲ್ಲಿರುವ ಹಣವನ್ನು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ಮೂಲಸೌಲಭ್ಯ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲಾ ವರ್ಗ್ದ ವಿದ್ಯಾರ್ತಿಗಳಿಗೆ ಲ್ಯಾಪ್‍ಟಾಪ್ ನೀಡಲು 250 ಕೋಟಿ ರೂ. ಕಾಯ್ದಿರಿಸಲಾಗಿದೆ. ಅದನ್ನು ಶೀಘ್ರವೇ ಕಾರ್ಯಾನುಷ್ಟಾನ ಮಾಡಬೇಕು. ಕಾಲೇಜುಗಳಲ್ಲಿರುವ ಪ್ರಾಧ್ಯಾಪಕರು , ಪ್ರಾಂಶುಪಾಲರ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಎಲ್ಲಾ ವಿಷಯಗಳ ಇತ್ಯರ್ಥಕ್ಕೆ ಶೀಘ್ರವೇ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಅವರು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ