ಕಸದ ಮಾಫಿಯಾ ನಿಯಂತ್ರಿಸಲು ಮುಂದಾದ ಬಿಬಿಎಂಪಿ

 

ಬೆಂಗಳೂರು, ಆ.14- ಜಾಹೀರಾತು ಮಾಫಿಯಾ ನಿಯಂತ್ರಣಕ್ಕೆ ಹೈಕೋರ್ಟ್ ಬೀಸಿದ ಛಾಟಿಗೆ ಬೆಚ್ಚಿಬಿದ್ದಿರುವ ಬಿಬಿಎಂಪಿ ಈಗ ಕಸದ ಮಾಫಿಯಾ ನಿಯಂತ್ರಿಸಲು ಮುಂದಾಗಿದೆ.

ವಾರ್ಡ್ ಮಟ್ಟದ ಕಸ ವಿಲೇವಾರಿಯಲ್ಲಿ ನಡೆದಿರುವ ಅವ್ಯವಹಾರವನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಹಾಗೂ ಎರಡು ವಾರಗಳಲ್ಲಿ ಹೊಸ ಕಸ ಗುತ್ತಿಗೆ ನೀಡುವುದಾಗಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿ ಸಭೆಯಲ್ಲಿಂದು ಸ್ಪಷ್ಟಪಡಿಸಿದರು.
ವಾರ್ಡ್ ನಂ.17 ಜೆ.ಪಿ.ಪಾರ್ಕ್ ವಾರ್ಡ್‍ನ ಕಸ ವಿಲೇವಾರಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ದಾಖಲೆಗಳು ಲಭ್ಯವಾಗಿದ್ದು, ಈ ಪ್ರಕರಣವನ್ನ ಎಸಿಬಿಗೆ ವಹಿಸಲಾಗಿದೆ. ನಕಲಿ ಬಿಲ್‍ಗೆ ಸಹಿ ಮಾಡಿದ ಕಿರಿಯ ಆರೋಗ್ಯ ಸಹಾಯಕ, ಎಇಇ, ಎಸ್‍ಸಿ ಮತ್ತು ಜೆಸಿ ಅವರುಗಳನ್ನು ಇಂದೇ ಅಮಾನತು ಮಾಡುತ್ತಿರುವುದಾಗಿ ಘೋಷಿಸಿದರು.

ಕಸ ವಿಲೇವಾರಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದ ಪಾಲಿಕೆ ವಕೀಲರನ್ನು ಪ್ಯಾಲನ್‍ನಿಂದ ತೆಗೆದು ಹಾಕುವುದಾಗಿ ಆಯುಕ್ತರು ತಿಳಿಸಿದರು.
198 ವಾರ್ಡ್‍ಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮುಂದೆ ಯಾವುದೇ ರೀತಿಯ ಅವ್ಯವಹಾರ ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಕಸ ವಿಲೇವಾರಿ ಗುತ್ತಿಗೆ ನೀಡಲು ಕೊಂಚ ವಿಳಂಬವಾಯಿತು. ಇನ್ನೆರಡು ವಾರದಲ್ಲಿ ಹೊಸ ಗುತ್ತಿಗೆ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು.
ಪಾಲಿಕೆ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಮುನಿರತ್ನ ಮಾತನಾಡಿ, ವಾರ್ಡ್ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಅನುದಾನ, ಬಿಬಿಎಂಪಿ ಅನುದಾನ, ಮುಖ್ಯಮಂತ್ರಿಗಳ ಅನುದಾನ ಈ ರೀತಿ ವಿವಿಧ ಅನುದಾನಗಳನ್ನು ತಂದು ಒಳ್ಳೆ ಕೆಲಸ ಮಾಡುತ್ತೇವೆ. ಆದರೆ, ಕೆಲವರು ಕೆಟ್ಟ ಹೆಸರು ತರುವ ಹಿನ್ನೆಲೆಯಲ್ಲಿ ಅವ್ಯವಹಾರ ನಡೆಸುತ್ತಾರೆ ಎಂದು ಹೇಳಿದರು.

ಉದಾಹರಣೆಗೆ ಜೆ.ಪಿ.ಪಾರ್ಕ್ ವಾರ್ಡ್ ಕಸ ವಿಲೇವಾರಿಗೆ 2016-17ರ ಏಪ್ರಿಲ್ ತಿಂಗಳಲ್ಲಿ 15 ಲಕ್ಷ ಇತ್ತು. ನಾಲ್ಕು ತಿಂಗಳ ನಂತರ 26 ಲಕ್ಷಕ್ಕೇರಿತು. ಡಿಸೆಂಬರ್‍ನಲ್ಲಿ ಈ ಮೊತ್ತ 36 ಲಕ್ಷಕ್ಕೆ ಏರಿಸಲ್ಪಟ್ಟಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದಾಗ 21 ಆಟೋ ಟಿಪ್ಪರ್ ಇರಬೇಕಿತ್ತು. ಆದರೆ, ಇಲ್ಲಿ 13 ಗೂಡ್ಸ್, ಎರಡು ಟಿಪ್ಪರ್ ಮಾತ್ರ ಇದ್ದವು. 1990ರ ಅಂಬಾಸೀಡರ್ ಕಂಪೆನಿ ವಾಹನ, ಎರಡು ಲಾರಿ, ಒಂದು ಟ್ಯಾಂಕರ್, ಎರಡು ಟ್ರ್ಯಾಕ್ಟರ್, ದಾವಣಗೆರೆ, ಹಾವೇರಿ, ಕೆಜಿಎಫ್ ನೋಂದಾಯಿತ ವಾಹನಗಳು ಸೇರಿದ್ದವು ಎಂದು ವಿವರ ನೀಡಿದರು.

ಈ ರೀತಿ ಬೋಗಸ್ ಬಿಲ್ ಮಾಡಿ ಅವ್ಯವಹಾರ ಮಾಡಲಾಗಿದೆ. ಕಾರ್ಮಿಕರಿಗೆ ಪಿಎಫ್ ನೀಡಬೇಕು. ಗುತ್ತಿಗೆ ಪಡೆದಿರುವವರ ಬಳಿ ಟಿನ್ ನಂಬರ್ ಇರಲಿಲ್ಲ. ಗಾರ್ಬೇಜ್ ಮಾಫಿಯಾ ನಡೆಯುತ್ತಿದೆ ಎಂದು ಕೇಸ್ ಹಾಕಿದ್ದೆ. ಬಿಬಿಎಂಪಿ ವಕೀಲರು ಆರೋಪಿಗಳ ಜತೆ ಶಾಮೀಲ್ ಆಗಿ ಪ್ರಕರಣಕ್ಕೆ ತಡೆ ತಂದಿದ್ದರು ಎಂದು ಮುನಿರತ್ನ ಹೇಳಿದರು.

ಪ್ರತಿ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಶಾಸಕರ ಮಾತನ್ನು ಬೆಂಬಲಿಸುತ್ತೇನೆ. ನಕಲಿ ಬಿಲ್‍ಗೆ ಸಹಿ ಮಾಡಿದ ಅಧಿಕಾರಿಗಳು ಯಾರು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಂಟಿ ಆಯುಕ್ತರನ್ನು ಕೂಡಲೇ ಸಸ್ಪೆಂಡ್ ಮಾಡಬೇಕೆಂದು ಆಗ್ರಹಿಸಿದರು.
ಇಷ್ಟೆಲ್ಲಾ ನಡೆಯುತ್ತಿದ್ದರೂ ಹೊಸ ಗುತ್ತಿಗೆ ಕೊಡಲು ವಿಳಂಬ ಮಾಡುತ್ತಿರುವುದು ಏಕೆ ಎಂದು ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಪ್ರಶ್ನಿಸಿದರು.
ಅವ್ಯವಹಾರಕ್ಕೆ ಅವಕಾಶವಾಗದಂತೆ ಗುತ್ತಿಗೆಯ ನಿಯಮಾವಳಿಯನ್ನು ರೂಪಿಸಲು ಕೊಂಚ ತಡವಾಗಿದೆ. ಎರಡು ವಾರದಲ್ಲಿ ಹೊಸ ಗುತ್ತಿಗೆ ನೀಡಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ