ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ತೆರಿಗೆ ವಿಧಿಸುವ ಪ್ರಸ್ತಾಪ ಪಾಲಿಕೆಯ ಮುಂದಿಲ್ಲ

 

ಬೆಂಗಳೂರು, ಆ.14- ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ತೆರಿಗೆ ವಿಧಿಸುವ ಪ್ರಸ್ತಾಪ ಪಾಲಿಕೆಯ ಮುಂದಿಲ್ಲ. ಈ ಬಗ್ಗೆ ಮೇಯರ್ ಸ್ಪಷ್ಟ ಸೂಚನೆ ನೀಡಿದ್ದು, ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ನೆಲ ತೆರಿಗೆ ವಿಧಿಸದಂತೆ ಸೂಚಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಗಣೇಶ್ ಹಬ್ಬಕ್ಕೆ ಪೆಂಡಾಲ್ ಹಾಕಿದರೆ ಕರ ವಸೂಲಿ ಮಾಡುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ. ಪ್ರತಿ ಚದರ ಅಡಿಗೆ 1 ರೂ.ಸಂಗ್ರಹ ಮಾಡಲಾಗುತ್ತಿತ್ತು. ಇತ್ತೀಚೆಗೆ 10 ರೂ.ಸಂಗ್ರಹ ಮಾಡಲಾಗುತ್ತಿದೆ. ಆದರೆ ಈ ಬಾರಿ ಅದನ್ನೂ ಸಂಗ್ರಹಿಸದಂತೆ ಮೇಯರ್ ಸೂಚಿಸಿದ್ದಾರೆ ಎಂದು ಹೇಳಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಿಬಿಎಂಪಿ ತೆರಿಗೆ ವಿಧಿಸುವ ಪ್ರಸ್ತಾಪದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.
ಪಾಲಿಕೆಯಿಂದ ಗಣೇಶನಿಗೆ ಕರ ವಸೂಲಿ ಮಾಡಲು ಮುಂದಾಗಿರುವ ಬಿಬಿಎಂಪಿ ವಿರುದ್ಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪಾಲಿಕೆ ಆವರಣದಲ್ಲಿಂದು ಗಣೇಶನ ಮೂರ್ತಿ ಇಟ್ಟು ಪ್ರತಿಭಟನೆ ನಡೆಸಿದರು.
ಹಿಂದೂ ಜಾಗರಣ ವೇದಿಕೆ ಹಾಗೂ ಗಣೇಶ ಉತ್ಸವ ಸಮಿತಿಯ ಕಾರ್ಯಕರ್ತರ ಪ್ರತಿಭಟನೆಗೆ ಬಿಜೆಪಿಯ ಪಾಲಿಕೆ ಸದಸ್ಯರು ಸಾಥ್ ನೀಡಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿ ಪೆÇಲೀಸರು ಬಿಗಿ ಭದ್ರತೆ ಒದಗಿಸಿ, ಬ್ಯಾರಿಕೇಡ್ ನಿರ್ಮಿಸಿದ್ದರು. ಪ್ರತಿಭಟನಕಾರರು ಬ್ಯಾರಿಕೇಡ್‍ಗಳನ್ನು ಎಳೆದುಹಾಕಿ ಪ್ರತಿಭಟನೆ ನಡೆಸಿ, ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ