ಗಣೇಶ ಉತ್ಸವ ಸಂದರ್ಭದಲ್ಲಿ ಕಠಿಣ ನಿರ್ಬಂಧ ಹೇರಲು ಪಾಲಿಕೆ ನಿರ್ಧಾರ

 

ಬೆಂಗಳೂರು, ಆ.13- ಹಿಂದೂ ಧಾರ್ಮಿಕ ಆಚರಣೆಯ ಮೇಲೆ ಬಿಬಿಎಂಪಿ ಕೆಂಗಣ್ಣು ಬೀರಿದ್ದು, ಗಣೇಶ ಉತ್ಸವ ಸಂದರ್ಭದಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲು ಪಾಲಿಕೆ ಮುಂದಾಗಿದೆ. ಸಾರ್ವಜನಿಕರಿಂದ ಪಾಲಿಕೆಯ ಹೊಸ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗಣೇಶ ಪ್ರತಿಷ್ಠಾಪನೆ ಮಾಡುವವರು ಇನ್ನು ಮುಂದೆ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಂದಿನ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವಾಗಿದೆ ಎಂದು ಪಾಲಿಕೆಯ ಮೂಲಗಳು ತಿಳಿಸಿವೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಪೆಂಡಾಲ್ ಬಾಡಿಗೆ ಕಟ್ಟದವರ ಮೇಲೆ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಒಂದು ಚದರ ಅಡಿ ಪೆಂಡಾಲ್ ಹಾಕಿದರೆ ದಿನಕ್ಕೆ 10 ರೂ. ನಂತೆ ಬಾಡಿಗೆ ನಿಗದಿಪಡಿಸಿರುವ ಪಾಲಿಕೆ, ಅದಕ್ಕೆ ಪರವಾನಿಗೆ ಪಡೆಯುವಂತೆ ಕಟ್ಟಪ್ಪಣೆ ನೀಡಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದೆ.

ಅಲ್ಲದೇ ಪೆಂಡಾಲ್ ಗಳಲ್ಲಿ ಈ ಹಿಂದೆ ಆಗಿದ್ದ ಅವಘಡಗಳ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವೈರ್ ಹಾಗೂ ಸೀರಿಯಲ್ ಸೆಟ್ ಬಳಸದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲು ಮುಂದಾಗಿದೆ. ಈ ಬಗ್ಗೆ ಇಂದು ನಡೆಯಲಿರುವ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿಯಿಂದ ಅನುಮತಿ ಪಡೆಯಬೇಕು, ಗಣೇಶ ಪ್ರತಿಷ್ಠಾಪನೆ ಜಾಗಕ್ಕೆ ಬಾಡಿಗೆ ಜತೆಗೆ ತೆರಿಗೆ ಪಾವತಿಸಬೇಕು, ಎಷ್ಟು ಅಗಲ ಪೆಂಡಾಲ್ ಹಾಕಲಾಗುತ್ತದೆಯೋ ಅಷ್ಟು ಅಗಲ ಜಾಗಕ್ಕೆ ಬಾಡಿಗೆ ನೀಡಬೇಕು ಮುಂತಾದವು ಈ ಪ್ರಸ್ತಾಪದಲ್ಲಿದೆ ಎನ್ನಲಾಗಿದೆ. ದೇಶದ ಯಾವ ಭಾಗದಲ್ಲೂ ಇಂಥಾ ವಿಚಿತ್ರ ತೆರಿಗೆ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ದಿನಕ್ಕೆ, ಐದು ದಿನಕ್ಕೆ, ಏಳು ದಿನಕ್ಕೆ ಹೀಗೆ ದಿನದ ಲೆಕ್ಕದಲ್ಲಿ ಬಾಡಿಗೆ ನೀಡಬೇಕಾಗುತ್ತದೆ. ಒಂದು ವೇಳೆ ಪರ್ಮಿಷನ್ ಪಡೆದು ಹಣ ಕಟ್ಟದಿದ್ರೆ ಗಣೇಶ ಮೂರ್ತಿ ಸೀಜ್ ಮಾಡಲು ಮುಂದಾಗಲಿದ್ದಾರೆ. ಒಂದು ಚದರ ಅಡಿಗೆ ಹತ್ತು ರೂಪಾಯಿ ನಿಗದಿ ಮಾಡಲಿರುವ ಬಿಬಿಎಂಪಿ, ಈ ಬಗ್ಗೆ ಇಂದಿನ ಬಿಬಿಎಂಪಿ ಕೌನ್ಸಿಲ್ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ