ಕಳೆದ ವರ್ಷ ದಾಖಲಅಗಿದ್ದ 7286 ಪ್ರಕರಣಗಳಲ್ಲಿ 2866 ಪ್ರಕರಣಳು ಇತ್ಯರ್ಥ

Varta Mitra News

ಬೆಂಗಳೂರು, ಆ.10-ರಾಜ್ಯಾದ್ಯಂತ ಇರುವ ವಿವಿಧ ಕೌಟುಂಬಿಕ ಸಲಹಾ ಕೇಂದ್ರಗಳಿಗೆ ಕಳೆದ ವರ್ಷ 7286 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2866 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಉಳಿದ ಪ್ರಕರಣಗಳನ್ನು ವಿವಿಧ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಟಿ.ವೆಂಕಟಲಕ್ಷ್ಮಿ ಬಸವಲಿಂಗರಾಜು ಹೇಳಿದರು.
ನಗರದ ಕೊಳಚೆ ನಿರ್ಮೂಲನಾ ಮಂಡಳಿಯ ಆವರಣದಲ್ಲಿರುವ ಸಮಾಜ ಕಲ್ಯಾಣ ಮಂಡಳಿಯ ಕಚೇರಿಯಲ್ಲಿ ರಾಜ್ಯಾದ್ಯಂತ ಇರುವ ಕೌಟುಂಬಿಕ ಸಲಹಾ ಕೇಂದ್ರಗಳ ಆಪ್ತ ಸಮಾಲೋಚಕರ ಮತ್ತು ಪ್ರತಿನಿಧಿಗಳ ಪುನರಾವಲೋಕನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ವತಿಯಿಂದ ನಡೆಯುತ್ತಿರುವ ಈ ಸಲಹಾ ಕೇಂದ್ರಗಳು ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಕೌಟುಂಬಿಕ ವ್ಯವಸ್ಥೆ ಅತ್ಯಂತ ಸೂಕ್ಷ್ಮವಾಗಿದ್ದು, ಕಾನೂನು, ಕಾಯ್ದೆಗಳ ಆಚೆ ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಬರುವ ಸಂತ್ರಸ್ಥ ಮಹಿಳೆಯರನ್ನು ಕುಟುಂಬದ ಸದಸ್ಯರು ಎಂದು ಭಾವಿಸಬೇಕು, ಅತ್ಯಂತ ಸೌಜನ್ಯಯುತವಾಗಿ ಸಮಾಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಕೊಡಿಸಬೇಕು ಎಂದು ಆಪ್ತಸಮಾಲೋಚಕರಿಗೆ ಮತ್ತು ಪ್ರತಿನಿಧಿಗಳಿಗೆ ಸಲಹೆ ನೀಡಿದರು.
ಕೌಟುಂಬಿಕ ಸಲಹಾ ಕೇಂದ್ರಗಳಿಗೆ ಪತಿಯಿಂದ ಕಿರುಕುಳಕ್ಕೊಳಗಾದವರು, ಕುಟುಂಬದ ಸದಸ್ಯರಿಂದ ದೌರ್ಜನ್ಯಕ್ಕೊಳಗಾದವರು, ಲೈಂಗಿಕ ಶೋಷಣೆಗೆ ಗುರಿಯಾದ ಸಂತ್ರಸ್ಥ ಮಹಿಳೆಯರು ಬರುತ್ತಾರೆ. ಅವರಿಗೆ ಸೂಕ್ತ ನೆರವು ನೀಡುವ ಜೊತೆಗೆ ಸ್ವಾವಲಂಬನೆ ಮತ್ತು ಆರ್ಥಿಕ ಸಬಲೀಕರಣದ ಮಾರ್ಗಗಳನ್ನು ತೋರಿಸುವ ಜವಾಬ್ದಾರಿಯು ಸಲಹಾ ಕೇಂದ್ರದ ಪ್ರತಿನಿಧಿಗಳ ಮೇಲಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಮಂಡಳಿ ಸುಮಾರು 63 ವರ್ಷಗಳಷ್ಟು ಹಳೆಯದಾದ ಸಂವಿಧಾನಿಕ ಸಂಸ್ಥೆ. ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರು ಇದನ್ನು ರಾಷ್ಟ್ರಮಟ್ಟದಲ್ಲಿ ಮೊದಲ ಬಾರಿಗೆ ದುರ್ಗಾಬಾಯಿ ದೇಶ್‍ಮುಖ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾಯಿತು. ಇಂದಿರಾಗಾಂಧಿಯವರು ಇದರ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಮಂಡಳಿಯಲ್ಲಿ ಈ ಮೊದಲು ಸುಮಾರು 36 ಯೋಜನೆಗಳು ಜಾರಿಯಲ್ಲಿದ್ದವು. ಬಾಲವಾಡಿ, ಪೌಷ್ಟಿಕ ಆಹಾರ ಯೋಜನೆ, ವೃತ್ತಿ ತರಬೇತಿ, ತಾತ್ಕಾಲಿಕ ತಂಗುದಾಣಗಳು, ಸಹಾಯವಾಣಿ ಸೇರಿದಂತೆ ಮಹಿಳೆಯರಿಗೆ ಹಲವಾರು ಯೋಜನೆಗಳು ಜಾರಿಯಲ್ಲಿದ್ದವು. ಆದರೆ ಅವುಗಳಲ್ಲಿ ಬಹುತೇಕ ಯೋಜನೆಗಳನ್ನು ರಾಜ್ಯಸರ್ಕಾರ ಬೇರೆ ಬೇರೆ ಸಂಸ್ಥೆಗಳಿಗೆ ವರ್ಗಾವಣೆ ಮಾಡಿದೆ. ಆಪ್ತ ಸಮಾಲೋಚನಾ ಕೇಂದ್ರಗಳನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಮಾತ್ರ ಉಳಿಸಿದೆ. ಮಹಿಳೆಯರ ಸಮಸ್ಯೆಗಳು ವ್ಯಾಪಕವಾಗಿದ್ದು ಅಷ್ಟೇ ಸಂಕೀರ್ಣವಾಗಿದೆ. ಅಭಿವೃದ್ಧಿಗಾಗಿ ಇನ್ನಷ್ಟು ಸಂಸ್ಥೆಗಳು ಕೆಲಸ ಮಾಡುವ ಅಗತ್ಯವಿದೆ.
ಸಮಾಜ ಕಲ್ಯಾಣ ಮಂಡಳಿ ಸುಮಾರು 20 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹೊಂದಿದೆ. ಇದರ ಮೂಲಕ ವೃತ್ತಿ ತರಬೇತಿ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರ ಸಹಕರಿಸಬೇಕೆಂದು ಕೇಂದ್ರ ಸಚಿವೆ ಮೇನಕಾ ಗಾಂಧಿ, ರಾಜ್ಯ ಸಚಿವೆ ಜಯಮಾಲಾ ಸೇರಿದಂತೆ ಹಲವರ ಬಳಿ ಮನವಿ ಮಾಡಿರುವುದಾಗಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ವರ್ಗಾವಣೆಯಾಗಿರುವ ಸ್ವಾದಾರ ಗೃಹ, ರಾಷ್ಟ್ರೀಯ ಶಿಶು ಪಾಲನಾ ಕೇಂದ್ರಗಳನ್ನು ಮತ್ತೆ ಮಂಡಳಿಗೆ ವಹಿಸಬೇಕು, ಕಾಣೆಯಾಗಿರುವವರ ಪತ್ತೆ ಮತ್ತು ಪುನರ್ವಸತಿ ಜವಾಬ್ದಾರಿಯನ್ನು ಮಂಡಳಿಗೆ ನೀಡಬೇಕು, ತಾಂಡಾಗಳಲ್ಲಿ ಹೆಣ್ಣು ಮಕ್ಕಳ ಮಾರಾಟ ಮತ್ತು ಕೊಲ್ಲುವಿಕೆಯನ್ನು ತಡೆಗಟ್ಟಲು ಅವಕಾಶ ನೀಡಬೇಕು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ವತಿಯಿಂದ ನಡೆಯುತ್ತಿರುವ 86 ಕಸ್ತೂರಬಾ ಶಾಲೆಗಳನ್ನು ಮಂಡಳಿ ಅಧೀನಕ್ಕೆ ಒಳಪಡಿಸಬೇಕು ಹಾಗೂ ಇನ್ನಷ್ಟು ಹೆಚ್ಚು ಕೆಲಸ ಮಾಡಲು ಮಂಡಳಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಕ್ಷಣಾಧಿಕಾರಿ ಶಶಿಕಲಾ ದೇವಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೌಟುಂಬಿಕ ದೌರ್ಜನ್ಯ ಕಾಯ್ದೆ 2005 ಮತ್ತು ರಕ್ಷಣಾಧಿಕಾರಿಗಳ ಪಾತ್ರ ಕುರಿತು ಉಪನ್ಯಾಸ ನೀಡಿದರು.
ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಆಪ್ತ ಸಮಾಲೋಚಕರು ಹಾಗೂ ಪ್ರತಿನಿಧಿಗಳು ತಮ್ಮ ಅನುಭವ ಹಾಗೂ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ