ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವಿಗೆ ಹೈಕೋರ್ಟ್ ನಿಂದ ಮುಂದುವರೆದ ಚಾಟಿ

ಬೆಂಗಳೂರು, ಆ.10- ಬೆಂಗಳೂರು ಮಹಾನಗರದ ಅಂದ ಕೆಡಿಸುತ್ತಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸಲು ಬಿಬಿಎಂಪಿ ವಿರುದ್ಧ ನಿರಂತರ ಚಾಟಿ ಬೀಸುತ್ತಿರುವ ಹೈಕೋರ್ಟ್ ಇಂದು ಕೂಡ ಅಧಿಕಾರಿಗಳ ವಿರುದ್ಧ ಕೆಂಡ ಕಾರಿದೆ.
ಜಾಹೀರಾತು ನೀತಿ ವಿಳಂಬಕ್ಕೆ ಕಾರಣವಾದ ಅಧಿಕಾರಿಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ಇಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರಿನಲ್ಲಿ ಫ್ಲೆಕ್ಸ್,ಬ್ಯಾನರ್ ತೆರವು ವಿಚಾರಣೆಗೆ ಸಂಬಂಧಿಸಿದಂತೆ ಸಾಯಿದತ್ತ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಫ್ಲೆಕ್ಸ್, ಬ್ಯಾನರ್ ತೆರವು ಸಂಬಂಧ ದಾಖಲಾಗಿರುವ ಎಫ್‍ಐಆರ್‍ಗಳಲ್ಲಿ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸದಿರುವ ಬಗ್ಗೆ ತೀವ್ರ ಗರಂ ಆಗಿದೆ.
ಜಾಹೀರಾತು ನೀತಿಯನ್ನು ಜಾರಿ ಮಾಡುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಮಾನ್ಯ ಮಾಡದಿರುವುದಕ್ಕೂ ಕೆಂಡಾಮಂಡಲವಾದ ನ್ಯಾಯಾಧೀಶರು, ಈ ವಿಳಂಬಕ್ಕೆ ಕಾರಣವಾದ ಅಧಿಕಾರಿಗಳ ಹೆಸರು ಸಲ್ಲಿಸಲು ಸೂಚಿಸಿದ್ದರು.
ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಅಧಿಕಾರಿಗಳು ತಮ್ಮ ಹುದ್ದೆಯ ಘನತೆಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಭತ್ಯೆ, ವೇತನ ವಿಚಾರದಲ್ಲಿ ಮಾತ್ರ ಸಾರ್ವಜನಿಕರ ಸೇವೆ ಎನ್ನುತ್ತೀರಿ. ಕರ್ತವ್ಯದ ವಿಚಾರದಲ್ಲಿ ಅದನ್ನು ತಾವು ಮರೆಯುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದೆ.
ನಗರದ ಅಂದವನ್ನು ಉಳಿಸುವಲ್ಲಿ, ನಷ್ಟವನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಫ್ಲೆಕ್ಸ್, ಬ್ಯಾನರ್ ಹಾವಳಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ 12 ಎಫ್‍ಐಆರ್‍ಗಳಲ್ಲಿ ಆರೋಪಿಗಳ ಬಗ್ಗೆ ಉಲ್ಲೇಖಿಸಿಲ್ಲ ಏಕೆ ? ಈ ಬಗ್ಗೆ ಮಧ್ಯಾಹ್ನ ಕೋರ್ಟ್‍ಗೆ ಉತ್ತರ ನೀಡುವಂತೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಅಡ್ವೋಕೇಟ್ ಜನರಲ್ ಉದಯ್‍ಹೊಳ್ಳ 223 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಸಿಸಿ ಟಿವಿ, ಪೆÇಲೀಸ್ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿದ್ದು, ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ಬಂಧಿತರಾಗಿರುವ 8 ಜನರಿಗೆ ಜಾಮೀನು ದೊರೆತಿಲ್ಲ ಎಂದು ಹೇಳಿಕೆ ನೀಡಿದರು.
ಫ್ಲೆಕ್ಸ್, ಬ್ಯಾನರ್ ಹಾಕಿಸಿಕೊಳ್ಳುವವರ ವಿರುದ್ಧ ಕ್ರಮವೇಕಿಲ್ಲ ಎಂದು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿದ್ದಲ್ಲದೆ, ಎಲ್ಲಾ 223 ಕೇಸುಗಳು ಜಾಮೀನು ಪಡೆಯುವಂತಹ ಕೇಸ್‍ಗಳೇ ಆಗಿವೆ ಎಂದಿದೆ.
ಆ,14ರೊಳಗೆ 223 ಕೇಸ್‍ಗಳ ಫಲಿತಾಂಶವನ್ನು ನ್ಯಾಯಾಲಯಕ್ಕೆ ನೀಡಲೇಬೇಕೆಂದು ಕಟ್ಟಪ್ಪಣೆ ಮಾಡಿದೆ. ಫ್ಲೆಕ್ಸ್ ತೆರವುಗೊಳಿಸಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ಗಂಭೀರ ಅಪರಾಧ. ಆಡಳಿತ ವ್ಯವಸ್ಥೆಗೆ ಇವರು ಸವಾಲಾಗಿದ್ದಾರೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಪ್ರಕರಣಗಳ ಬಗ್ಗೆ ಪ್ರತಿನಿತ್ಯ ವಿಚಾರಣೆ ನಡೆಸಿ ಆಗಸ್ಟ್‍ನಲ್ಲೇ ತೀರ್ಪು ನೀಡುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಒಟ್ಟಾರೆ ನ್ಯಾಯಾಲಯ ಅನಧಿಕೃತ ಫ್ಲೆಕ್ಸ್, ಬ್ಯಾನರ್‍ಗಳ ವಿರುದ್ಧ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ ನಗರದಾದ್ಯಂತ ಇದ್ದ ಎಲ್ಲಾ ಫ್ಲೆಕ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸಿದೆ.
ಜಾಹೀರಾತು ನೀತಿ ರೂಪಿಸಬೇಕೆಂದು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಬಿಬಿಎಂಪಿಯಲ್ಲಿ ತುರ್ತುಸಭೆ ನಡೆಸಿ ಒಂದು ವರ್ಷ ಕಾಲ ಯಾವುದೇ ಫ್ಲೆಕ್ಸ್, ಬ್ಯಾನರ್‍ಗಳನ್ನು ಹಾಕುವಂತಿಲ್ಲ ಎಂದು ಪರ್ಮಾನು ಹೊರಡಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ