ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ನಿಯಮ ಉಲ್ಲಂಘನೆ: ಕಾಂಗ್ರೆಸ್ ವಕ್ತಾರ ಕೆಂಗಲ್ ಶ್ರೀಪಾದ

 

ಬೆಂಗಳೂರು,ಆ.3- ಸ್ಯಾಂಕಿ ಕೆರೆಯ ಅಭಿವೃದ್ಧಿ ಮತ್ತು ಸೌಂದರೀಕರಣದ ಹೆಸರಿನಲ್ಲಿ ಹಲವಾರು ಉಲ್ಲಂಘನೆಗಳು ನಡೆದಿದೆ ಎಂದು ಕಾಂಗ್ರೆಸ್ ವಕ್ತಾರ ಕೆಂಗಲ್ ಶ್ರೀಪಾದ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಮಾಡಲಾಗಿರುವ ಅವೈಜ್ಞಾನಿಕ ಯೋಜನೆಯಿಂದಾಗಿ ಇದಕ್ಕೆ ಹೊಂದಿಕೊಂಡಿರುವ ಜನರಿಗೆ ತೀವ್ರ ತೊಂದರೆಯಾಗಿದೆ, ಮತ್ತೊಂದೆಡೆ ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ವಶಪಡಿಸಿಕೊಂಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ಸ್ಯಾಂಕಿ ಕೆರೆಯ ನೀರು ಕೋಡಿ ಬೀಳುವ ಮಟ್ಟವನ್ನು ಅವೈಜ್ಞಾನಿಕವಾಗಿ 2 ಮೀಟರ್‍ಗಳಷ್ಟು ಎತ್ತರಿಸಲಾಗಿದೆ. ಇದರಿಂದ ಕೆರೆಯ ನೀರು ಸಂಗ್ರಹ ಸಾಮಥ್ರ್ಯ ಹೆಚ್ಚಾಗಿ ಹಿನ್ನೀರು ಆ ಜಾಗಕ್ಕೆ ಹೊಂದಿಕೊಂಡಿರುವ ಮನೆಗಳಿಗೆ ನುಗ್ಗಿ ನಿವಾಸಿಗಳಿಗೆ ವಾಸ ಮಡುವುದು ಕಷ್ಟಕರವಾಗಿದೆ.
ಕೆರೆಯ ನೀರಿನ ಕೋಡಿ ಮಟ್ಟ ಹೆಚ್ಚಿಸಿರುವುದು ಎಲ್ಲಾ ಪರಿಸರ ನಿಯಮಗಳಿಗೆ ವಿರುದ್ದವಾಗಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ಪ್ರಸ್ತಾವದಲ್ಲಿ ನಿಗದಿಪಡಿಸಿದ ಸ್ಥಳ ಹೊರತುಪಡಿಸಿ ಬೇರೊಂದು ಜಾಗದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡುವ ಮೂಲಕ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿಯ 9 ಲಕ್ಷ ಅನುದಾನವನ್ನು ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿದರು.
ಮಲ್ಲೇಶ್ವರಂ ಕ್ಷೇತ್ರದ ಅರಮನೆನಗರ ವ್ಯಾಪ್ತಿಯಲ್ಲಿ ಎರಡು ಬಸ್ ತಂಗುದಾಣಗಳ ನಿರ್ಮಾಣಕ್ಕೆ 18 ಲಕ್ಷ ರೂ.ಗಳ ಅನುದಾನ ಮಂಜೂರು ಮಾಡಿದ್ದರು. ಈ ಯೋಜನೆಯ ಮೂಲ ಪ್ರಸ್ತಾವದ ಪ್ರಕಾರ ಪ್ಯಾಲೇಸ್ ಗುಟ್ಟಹಳ್ಳಿ ಈಜುಕೊಳದ ಬಳಿ ಸದಾಶಿವನಗರದಲ್ಲಿ ಮತ್ತೊಂದು ತಂಗುದಾಣ 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಬೇಕಿತ್ತು.
ಆದರೆ ಸದಸ್ಯರು ಅನುದಾನ ನೀಡಿದ ನಂತರ ಬಂದು ತಂಗುದಾಣವನ್ನು ಮಾತ್ರ ನಿಗದಿತ ಸ್ಥಳದಲ್ಲಿ ನಿರ್ಮಿಸಿ ಮತ್ತೊಂದನ್ನು ಪ್ರಸ್ತಾವದಲ್ಲಿ ನಿಗದಿ ಮಾಡದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಇದನ್ನು ಬಸ್ಸುಗಳೇ ಸಂಚರಿಸದ 13ನೇ ಮುಖ್ಯರಸ್ತೆ ಆರ್‍ಎಂವಿ ಎಚ್‍ಕೆಎಸ್ ಕಾಲೇಜು ಬಳಿ ನಿರ್ಮಿಸಲಾಗಿದೆ. ಇದರಿಂದ ಜನರ ತೆರಿಗೆಯ 9 ಲಕ್ಷ ಹಣ ವ್ಯರ್ಥವಾಗಿದೆ ಎಂದು ತಿಳಿಸಿದರು.
ಗುತ್ತಿಗೆದಾರರು ವ್ಯಾಪ್ತಿಯ ಪಾಲಿಕೆ ಸದಸ್ಯರು ಸಂಬಂಧಿಸಿದ ಶಾಸಕರು ಮತ್ತು ಆನಂದರಾವ್ ವೃತ್ತದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿಯ ಅಧಿಕಾರಿಗಳು ಶಾಮೀಲು ಆಗಿ ಉದ್ದೇಶಪೂರ್ವಕವಾಗಿ ಈ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಿದ್ದಾರೆ ಎಂದು ದೂರಿದರು.
ಜಯರಾಮ್ ಕಾಲೋನಿಯ ನಿವಾಸಿಗಳ ಮುಖಂಡ ಜೆ.ಪ್ರಭು ಮಾತನಾಡಿ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಂ.ಆರ್.ಜಯರಾಮ್ ಕಾಲೋನಿಯ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕಾಲೋನಿಯಲ್ಲಿ 50 ವರ್ಷಗಳಿಂದಲೂ ಪರಿಶಿಷ್ಟ ಜಾತಿಗೆ ಸೇರಿದವರೇ ಹೆಚ್ಚು ವಾಸು ಮಾಡುತ್ತಿದ್ದು, ಈ ಜಾಗ ಹೊರತುಪಡಿಸಿ ಬೇರೆ ನಿವೇಶನವಾಗಲಿ, ವಸತಿ ಸೌಲಭ್ಯ ನಮಗೆ ಇಲ್ಲ ಎಂದು ತಿಳಿಸಿದರು.
ಈ ಕಾಲೋನಿಗೆ 19.84ರಲ್ಲಿ ಸದರಿ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಿ ಇಲ್ಲಿನ ಬಡ ನಿವಾಸಿಗಳಿಗೆ ಬೋರ್ಡ್ ವತಿಯಿಂದ ಮೂಲ ಸೌಕರ್ಯಗಳನ್ನು ಒದಗಿಸಿದೆ. ಆದ್ದರಿಂದ ನಾವು ಮನೆಗಳಿಗೆ ವಿದ್ಯುತ್ ಬಿಲ್ ಆಧಾರ್ ಕಾರ್ಡ್ ಚುನಾವಣಾ ಗುರುತಿನ ಚೀಟಿಯೂ ಸಹ ಇದೇ ವಿಳಾಸಕ್ಕೆ ಹೊಂದಿರುತ್ತೇವೆ ಎಂದು ತಿಳಿಸಿದರು.
ಆದ್ದರಿಂದ ಕೂಡಲೇ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ಮನೆ ಮೇಲಿನ ನಮ್ಮ ಹಕ್ಕನ್ನು ಖಾತರಿಪಡಿಸಬೇಕೆಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ