ಲಂಡನ್: ವಿರಾಟ್ ಕೊಹ್ಲಿ ತಾನೇಕೆ ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಎಂಬುದನ್ನು ಇಂಗ್ಲೆಂಡ್ ನೆಲದಲ್ಲಿ ಸಾಬೀತು ಪಡಿಸಲಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಇದೇ ಬುಧವಾರದಿಂದ ಎಡ್ಜ್ ಬ್ಯಾಸ್ಟನ್ ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗುತ್ತಿದ್ದು, ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಶಾಸ್ತ್ರಿ, ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್ ಪ್ರವಾಸ ಮಾಡಿದ್ದ ವಿರಾಟ್ ಕೊಹ್ಲಿ ಪ್ರಸ್ತುತ ಇರುವ ವಿರಾಟ್ ಕೊಹ್ಲಿಗೂ ಸಾಕಷ್ಟು ವ್ಯತ್ಯಾಸವಿದೆ. ಖಂಡಿತಾ ಕೊಹ್ಲಿ ತಾವೇಕೆ ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಎಂಬುದನ್ನು ಸಾಬೀತು ಪಡಿಸಲಿದ್ದಾರೆ ಎಂದು ಹೇಳಿದರು.
‘ಕೊಹ್ಲಿ ಬ್ಯಾಟಿಂಗ್ ದತ್ತಾಂಶಗಳನ್ನು ಗಮನಿಸಿದರೆ ಈ ಬಗ್ಗೆ ಉತ್ತರ ಸಿಗುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಆತನ ಬ್ಯಾಟಿಂಗ್ ಸಾಧನೆ ಏನು ಎಂಬುದನ್ನು ನಾನು ಒತ್ತಿ ಹೇಳಬೇಕಿಲ್ಲ. ನಾಲ್ಕು ವರ್ಷಗಳ ಹಿಂದಿನ ಕೊಹ್ಲಿಗೂ ಪ್ರಸ್ತುತ ಇರುವ ಕೊಹ್ಲಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಎಂತಹುದೇ ಕಠಿಣ ಪರಿಸ್ಥಿತಿಯನ್ನೂ ಕೊಹ್ಲಿ ನಿಭಾಯಿಸುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೊಂದಿದ್ದಾರೆ. ಎಲ್ಲ ಸರಣಿಗಳನ್ನೂ ನಾವು ಗೆಲ್ಲಲೆಂದೇ ಆಡುವುದು. ಈ ಸರಣಿಯನ್ನೂ ಕೂಡ. ಆಕ್ರಮಣಕಾರಿ ಮನೋಭಾವ ತಪ್ಪೇನಲ್ಲ. ಆದರೆ ಅದು ಎಲ್ಲೆ ಮೀರಬಾರದು. ಕೇವಲ ಅಂಕಿಸಂಖ್ಯೆಗೋ ಅಥವಾ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಾವು ಇಲ್ಲಿಗೆ ಬಂದಿಲ್ಲ. ಸರಣಿ ಗೆಲುವು ನಮ್ಮ ಗುರಿ ಎಂದು ಶಾಸ್ತ್ರಿ ಹೇಳಿದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಇತ್ತೀಚೆಗಿನ ತಂಡದ ಸಾಧನೆ ಅತ್ಯುತ್ತಮವಾಗಿದೆ. ಕಳೆದ ನಾಲ್ಕೈದು ಸರಣಿಗಳಲ್ಲಿ ನಾವು ಉತ್ತಮ ಕ್ರಿಕೆಟ್ ಪ್ರದರ್ಶನ ನೀಡಿದ್ದೇವೆ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಆಡಿದರೆ ಖಂಡಿತಾ ಸರಣಿ ಗೆಲುವು ನಮ್ಮದೇ. ವಿದೇಶಗಳಲ್ಲಿ ತಂಡದ ಪ್ರದರ್ಶನದ ಕುಂಠಿತವಾಗಿರಬಹುದು. ಆದರೆ ವಿಶ್ವದ ಯಾವುದೇ ತಂಡ ಕೂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ವಿದೇಶಿ ಸರಣಿಗಳಲ್ಲಿ ಪ್ರವಾಸಿ ತಂಡಕ್ಕೆ ಹಿನ್ನಡೆ ಸಾಮಾನ್ಯವೇ ಆದರೂ ಇಂಗ್ಲೆಂಡ್ ಸರಣಿ ಇದಕ್ಕೆ ತದ್ವಿರುದ್ಧವಾಗುತ್ತದೆ ಎಂದು ಹೇಳಿದರು.
ಇನ್ನು ತಂಡಕ್ಕೆ ತಲೆನೋವಾಗಿರುವ 3 ಮತ್ತು ನಾಲ್ಕನೇ ಕ್ರಮಾಂಕದ ಕುರಿತು ಮಾತನಾಡಿದ ಶಾಸ್ತ್ರಿ, ನಮಗೂ ಆ ಬಗ್ಗೆ ಚಿಂತೆ ಇದೆ. ಆದರೆ ಚೇತೇಶ್ವರ ಪೂಜಾರ 3ನೇ ಕ್ರಮಾಂಕದಲ್ಲಿ ಆಡುವುದರಿಂದ ಆ ಬಗ್ಗೆ ಹೆಚ್ಚಿನ ಒತ್ತಡವಿಲ್ಲ. ಪೂಜಾರ ಅನುಭವಿ ಆಟಗಾರನಾಗಿದ್ದು, ಫಾರ್ಮ್ ಗೆ ಮರಳಿರುವುದು ಖುಷಿಯ ವಿಚಾರ ಎಂದು ಹೇಳಿದರು. ಅಂತೆಯೇ ತಂಡದಲ್ಲಿ ಕೆಎಲ್ ರಾಹುಲ್ ಗೂ ಅವಕಾಶ ನೀಡುವ ಕುರಿತು ಪರೋಕ್ಷ ಮಾಹಿತಿ ನೀಡಿದ ಶಾಸ್ತ್ರಿ, ಮೂರನೇ ಆರಂಭಿಕ ಆಟಗಾರನಾಗಿ ರಾಹುಲ್ ರನ್ನು ಆಯ್ಕೆ ಮಾಡಲಾಗಿದೆ. ಆದರೆ ಆತನ ಯಾವುದೇ ಕ್ರಮಾಂಕಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ತಂಡಕ್ಕೆ ಮತ್ತಷ್ಟು ಬಲ ತಂದಿದೆ ಎನ್ನುವ ಮೂಲಕ ಪೂಜಾರ ಮತ್ತು ರಾಹುಲ್ ಇಬ್ಬರಿಗೂ ತಂಡದಲ್ಲಿ ಅವಕಾಶ ನೀಡುವ ಕುರಿತು ರವಿಶಾಸ್ತ್ರಿ ಹೇಳಿದರು.