‘ಕಿಸಾನ್ ವಿಕಾಸ್ ಪತ್ರ’ ಹೂಡಿಕೆಗೆ ಉತ್ತಮ ಯೋಜನೆ

ಹೈದರಾಬಾದ್: ಭಾರತೀಯ ಅಂಚೆ ಇಲಾಖೆ ಸಮಾಜದ ವಿವಿಧ ವರ್ಗಗಳ ಜನರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತಿದ್ದು ಕಿಸಾನ್ ವಿಕಾಸ್ ಪತ್ರ ಅವುಗಳಲ್ಲಿ ಪ್ರಮುಖವಾದುದು.ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಶೇಕಡಾ 7.3ರಷ್ಟು ವಾರ್ಷಿಕ ಬಡ್ಡಿ ನೀಡಲಾಗುತ್ತದೆ. 9 ವರ್ಷ 10 ತಿಂಗಳು ಕಳೆದ ಮೇಲೆ ಹೂಡಿಕೆ ದ್ವಿಗುಣವಾಗುತ್ತದೆ. ದೀರ್ಘಕಾಲದಲ್ಲಿ ಸುರಕ್ಷತೆಯ ಹೂಡಿಕೆ ದೃಷ್ಟಿಯಿಂದ ಕಿಸಾನ್ ವಿಕಾಸ್ ಪತ್ರ ಉತ್ತಮ ಹೂಡಿಕೆ ಆಯ್ಕೆಯಾಗಿದೆ.ಭಾರತದಾದ್ಯಂತ ಇರುವ ಎಲ್ಲಾ ಅಂಚೆ ಕಚೇರಿಗಳಲ್ಲಿ ಕಿಸಾನ್ ವಿಕಾಸ್ ಪತ್ರ ಸೌಲಭ್ಯವಿದೆ. ಕನಿಷ್ಠ ಸಾವಿರ ರೂಪಾಯಿ ಠೇವಣಿಯಿಡಬೇಕು. ಗರಿಷ್ಠ ಎಷ್ಟು ಹಣ ಬೇಕಾದರೂ ಇಡಬಹುದು. ಆದರೆ ಜನರಲ್ಲಿ ಕಿಸಾನ್ ವಿಕಾಸ್ ಪತ್ರ ಬಗ್ಗೆ ಇರುವ ಒಂದು ತಪ್ಪು ಗ್ರಹಿಕೆಯೆಂದರೆ ಕೇವಲ ರೈತ ಸಮುದಾಯದವರಿಗೆ ಮಾತ್ರ ಇರುವ ಹೂಡಿಕೆಯಿದು ಎಂಬುದು. ಅದು ತಪ್ಪು. ಯಾರು ಬೇಕಾದರೂ, ಯಾವ ಉದ್ಯೋಗದಲ್ಲಿರುವವರು ಬೇಕಾದರೂ ಇದರಲ್ಲಿ ಹೂಡಿಕೆ ಮಾಡಬಹುದು ಎನ್ನುತ್ತಾರೆ ಹೈದರಾಬಾದಿನ ಪ್ರಧಾನ ಅಂಚೆ ಕಚೇರಿಯ ವ್ಯವಸ್ಥಾಪಕ ಪಿವಿಎಸ್ ರೆಡ್ಡಿ.18 ವರ್ಷ ಪೂರೈಸಿದವರು ಕಿಸಾನ್ ವಿಕಾಸ್ ಪ್ರಮಾಣಪತ್ರವನ್ನು ಮಾಡಿಸಿಕೊಳ್ಳಬಹುದು. 18 ವರ್ಷಕ್ಕಿಂತ ಕೆಳಗಿನವರ ಪರವಾಗಿಯೂ ಮಾಡಿಸಿಕೊಳ್ಳಬಹುದು ಅಥವಾ ಇಬ್ಬರು ವಯಸ್ಕರು ಜಂಟಿಯಾಗಿ ಮಾಡಿಸಬಹುದು. ಹೂಡಿಕೆ ಮಾಡಿದ ಮೊತ್ತ ಮೆಚ್ಯೂರಿಟಿಗೆ ಬರಲು 118 ತಿಂಗಳು ಬೇಕಾಗಿದ್ದು ಅಗತ್ಯಬಿದ್ದರೆ ಎರಡೂವರೆ ವರ್ಷಗಳಲ್ಲಿ ನಗದು ಪಡೆಯಬಹುದು.ಅಂಚೆ ಕಚೇರಿಯ ಪ್ರಮುಖ ಹೂಡಿಕೆಗಳಲ್ಲಿ ಕಿಸಾನ್ ವಿಕಾಸ್ ಪತ್ರ ಕೂಡ ಒಂದು. ಅಂಚೆ ಕಚೇರಿಯ ಬೇರೆ ಉಳಿತಾಯ ಯೋಜನೆಗಳಿಗಿಂತ ಇದರಲ್ಲಿ ಬಡ್ಡಿಮೊತ್ತ ಕಡಿಮೆಯಾದರೂ ಕೂಡ ದೀರ್ಘಾವಧಿಯಲ್ಲಿ ಹಣ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಇದು ಸುರಕ್ಷಿತವಾದ ಆಯ್ಕೆಯಾಗಿದೆ. ಕಿಸಾನ್ ವಿಕಾಸ್ ಪತ್ರದಡಿಯಲ್ಲಿ ಹೂಡಿಕೆ ಮಾಡುವುದು, ವ್ಯವಹಾರ ನಡೆಸುವುದು ಮತ್ತು ಅಗತ್ಯಬಿದ್ದರೆ ಬೇರೆಡೆಗೆ ವರ್ಗಾಯಿಸುವುದು ಸುಲಭವಾಗಿದೆ. ಗ್ರಾಮೀಣ ಪ್ರದೇಶದವರಿಗೆ ಇನ್ನೂ ಅನುಕೂಲ. ಆದರೆ ಇದರಿಂದ ಯಾವುದೇ ತೆರಿಗೆ ವಿನಾಯ್ತಿ ಸಿಗುವುದಿಲ್ಲ ಎನ್ನುತ್ತಾರೆ ಹಣಕಾಸು ಸಲಹೆಗಾರ ಸುಬ್ಬರಾವ್.ಭಾರತೀಯ ಅಂಚೆ ಕಚೇರಿಯಲ್ಲಿ ಸುಕನ್ಯ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಇತ್ಯಾದಿ ಜನಪ್ರಿಯವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ